ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ದಿಗಿಲು ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಪ್ರಯಾಣ ದರದ ವಿಷಯವಾಗಿ ಉಂಟಾದ ಜಗಳದಲ್ಲಿ ರಾಪಿಡೋ (Rapido) ಕ್ಯಾಬ್ ಚಾಲಕನೊಬ್ಬ 42 ವರ್ಷದ ಐಟಿ ಉದ್ಯೋಗಿಯ ಬೆರಳನ್ನೇ ಕಚ್ಚಿ ತುಂಡರಿಸಿದ್ದಾನೆ. ಹಿಂಜವಡಿ ಐಟಿ ಪಾರ್ಕ್ ಬಳಿ ಈ ಘಟನೆ ನಡೆದಿದೆ.
ಹಿಂಜವಡಿ ಫೇಸ್-1 ರ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿ, ಶಿಫ್ಟ್ ಮುಗಿಸಿ ಮನೆಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕನು ಆ್ಯಪ್ನಲ್ಲಿ ತೋರಿಸಿದ ದರವನ್ನು ನಿರಾಕರಿಸಿ, ‘ಮೀಟರ್’ ಪ್ರಕಾರ ಹೆಚ್ಚಿನ ಹಣ ನೀಡುವಂತೆ ಪಟ್ಟು ಹಿಡಿದಿದ್ದನು.
ಉದ್ಯೋಗಿಯು ಆ್ಯಪ್ ದರಕ್ಕಿಂತ ಹೆಚ್ಚು ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಚಾಲಕನು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಅವರ ಎಡಗೈ ಬೆರಳುಗಳನ್ನು ಬಾಯಿಯಿಂದ ಬಲವಾಗಿ ಕಚ್ಚಿದ್ದಾನೆ.ಚಾಲಕ ಎಷ್ಟು ಜೋರಾಗಿ ಕಚ್ಚಿದ್ದನೆಂದರೆ, ಉದ್ಯೋಗಿಯ ಒಂದು ಬೆರಳಿನ ಮೇಲ್ಭಾಗ ಕತ್ತರಿಸಿ ಹೋಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹಿಂಜವಡಿ ಪೊಲೀಸರು ಐಪಿಸಿ (ಈಗಿನ ಬಿಎನ್ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.








