ಉತ್ತರ ಪ್ರದೇಶದ ಆಲಿಗಢದಲ್ಲಿ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಮತ್ತು ಆಕೆಯ ಪ್ರೇಮಿ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಲ್ಲದೆ, ಗುರುತು ಪತ್ತೆಯಾಗದಂತೆ ಆಸಿಡ್ ಸುರಿದು ಸುಟ್ಟಿದ್ದಾರೆ.
ಛರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಭಯಾನಕ ಘಟನೆ ವರದಿಯಾಗಿದ್ದು, ಯೂಸುಫ್ ಎಂಬ ವ್ಯಕ್ತಿಯನ್ನು ಅವನ ಹೆಂಡತಿ ಹಾಗೂ ಅವಳ ಪ್ರಿಯಕರ ಪಿತೂರಿ ನಡೆಸಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಮೃತ ಯೂಸುಫ್ ತಂದೆ ಭುರೆ ಖಾನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತಮ್ಮ ಮಗ ಜುಲೈ 29 ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದ ಮತ್ತು ಹಿಂತಿರುಗಲಿಲ್ಲ ಎಂದು ತಿಳಿಸಿದ್ದಾರೆ. ಅವರು ಮಾರುಕಟ್ಟೆಯಲ್ಲಿ ಪಲ್ಲೇದಾರಿಯಾಗಿ ಕೆಲಸ ಮಾಡುತ್ತಿದ್ದರು. ಕುಟುಂಬವು ಹಲವಾರು ದಿನಗಳವರೆಗೆ ಆತನನ್ನು ಹುಡುಕುತ್ತಲೇ ಇತ್ತು, ಆದರೆ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ, ಕುಟುಂಬವು ಛರ್ರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದೆ.
ಕೆಲವು ದಿನಗಳ ನಂತರ, ಕಾಸ್ಗಂಜ್ ಜಿಲ್ಲೆಯ ಧೋಲ್ನಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಆಸಿಡ್ ನಿಂದ ಸುಟ್ಟುಹೋದ ಮತ್ತು ಇಟ್ಟಿಗೆ ಗೂಡುಗಳ ನಡುವೆ ಬಿದ್ದಿದ್ದ ಅಪರಿಚಿತ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ದೇಹವು ಹುಳುಗಳಿಂದ ತುಂಬಿತ್ತು. ಪೊಲೀಸರು ಆ ಶವವನ್ನು ಯೂಸುಫ್ ಎಂದು ಗುರುತಿಸಿದರು. ತನಿಖೆಯಲ್ಲಿ ಯೂಸುಫ್ ಪತ್ನಿ ತಬಸ್ಸುಮ್ ಮತ್ತು ಆಕೆಯ ಪ್ರಿಯಕರ ಡ್ಯಾನಿಶ್ ಸೇರಿ ಆತನನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಗೂ ಮುನ್ನ, ಯೂಸುಫ್ ನ ಕೈಕಾಲುಗಳನ್ನು ಕಟ್ಟಿ, ಹರಿತವಾದ ಆಯುಧದಿಂದ ಹೊಟ್ಟೆಯನ್ನು ಸೀಳಲಾಗಿತ್ತು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ಪತ್ನಿ ತಬಸ್ಸುಮ್ ಳನ್ನು ಬಂಧಿಸಿ ಜೈಲಿಗೆ ಕಳುಹಿಸಿದರು, ಆದರೆ ಡ್ಯಾನಿಶ್ ಮತ್ತು ಆತನ ಕುಟುಂಬ ಇನ್ನೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರ ಹುಡುಕಾಟದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಡಿಎಸ್ಪಿ ಧನಂಜಯ್ ಸಿಂಗ್ ಪ್ರಕರಣವನ್ನು ದೃಢಪಡಿಸಿದ್ದು, ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.