ದಾವಣಗೆರೆ: ತನ್ನನ್ನು ನೋಡಿ ಬೊಗಳಿತು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮುದ್ದಾದ ಸಾಕು ನಾಯಿಯನ್ನು ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವಿ ಎಂಬುವವರು ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರವಿ ಅವರು ನಾಯಿಯನ್ನು ವಾಕಿಂಗ್ ಕರೆದೊಯ್ಯುತ್ತಿದ್ದ ವೇಳೆ, ಎದುರಾದ ಮಂಜುನಾಥ್ ಎಂಬಾತನನ್ನು ನೋಡಿ ನಾಯಿ ಬೊಗಳಿದೆ. ಕೇವಲ ನಾಯಿ ಬೊಗಳಿದ ಕಾರಣಕ್ಕೆ ವಿಪರೀತ ಸಿಟ್ಟುಗೊಂಡ ಮಂಜುನಾಥ್, ಸ್ವಲ್ಪವೂ ಕರುಣೆ ತೋರದೆ ತನ್ನ ಬಳಿಯಿದ್ದ ಕುಡುಗೋಲಿನಿಂದ ನಾಯಿಯನ್ನು ಮನಬಂದಂತೆ ಕೊಚ್ಚಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ನಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದೆ.
ಮಾಲೀಕನ ಮೇಲೂ ಹಲ್ಲೆ, ಆರೋಪಿ ಬಂಧನ:
ತನ್ನ ಕಣ್ಮುಂದೆಯೇ ಮುದ್ದಿನ ನಾಯಿಯನ್ನು ಬರ್ಬರವಾಗಿ ಕೊಂದಿದ್ದನ್ನು ಮಾಲೀಕ ರವಿ ಅವರು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಮಂಜುನಾಥ್, ರವಿ ಅವರ ಮೇಲೂ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಮೂಕಪ್ರಾಣಿಯನ್ನು ಕೊಂದು ವಿಕೃತಿ ಮೆರೆದ ಮಂಜುನಾಥ್ನ ಕೃತ್ಯಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿ ಮಂಜುನಾಥ್ನನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








