ಚಿಕ್ಕಮಗಳೂರು : ಚಿಕ್ಕಮಂಗಳೂರಿನ ದೋಣಿಕಣ ಬಡಾವಣೆಯಲ್ಲಿ ವೈದ್ಯ ಪತಿ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ. ಗಂಡ ವೃತ್ತಿಯಲ್ಲಿ ವೈದ್ಯನಾಗಿದ್ದರೂ ಮಾನವೀಯತೆಯನ್ನೇ ಮರೆತು ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೃಹ ಬಂಧನಕ್ಕೆ ಒಳಗಾದ ಮಹಿಳೆಯನ್ನು ವಿನುತಾ ರಾಣಿ (45) ಎಂದು ತಿಳಿದುಬಂದಿದೆ. ಸದ್ಯ ಮಹಿಳೆಯನ್ನು ಗೃಹಬಂಧನದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೂತಾ ರಾಣಿಯನ್ನು 22 ವರ್ಷಗಳ ಹಿಂದೆ ಡಾ.ರವಿಕುಮಾರ್ ಎಂಬ ವೈದ್ಯನಿಗೆ ವಿವಾಹ ಮಾಡಿಕೊಡಲಾಗಿತ್ತು.ಕಳೆದ 1 ವರ್ಷದ ಹಿಂದೆ ವಿನುತಾರಾಣಿ ಅವರಿಗೆ ಡಾ.ರವಿಕುಮಾರ್ ವಿಚ್ಛೇದನ ನೀಡಿದ್ದಾರೆ.
ವಿನುತಾ ರಾಣಿ ಮೂಲತಃ ಶಿವಮೊಗ್ಗದ ವಿನೋಬಾನಗರದವರು, ಆದರೆ ವಿಚ್ಛೇದನ ನೀಡಿ ಕೂಡಾ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ವಿನುತಾ ರಾಣಿ ಅವರ ಮನೆಯವರು ಆರೋಪಿಸಿದ್ದಾರೆ. ಇದೀಗ ಮಹಿಳೆಯನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಪತಿ ಡಾ, ರವಿಕುಮಾರ್ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಮಹಿಳೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.ರವಿಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಡಾ. ರವಿಕುಮಾರ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. 22 ವರ್ಷಗಳ ಹಿಂದೆ ಡಾ.ರವಿಕುಮಾರ್, ವಿನುತಾರಾಣಿ (48) ಅವರನ್ನು ವಿವಾಹವಾಗಿದ್ದ.
ಡಾ.ರವಿಕುಮಾರ್ ವಿನುತಾ ರಾಣಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಕುಟುಂಬ ಹಾಗೂ ಮಹಿಳೆಯ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡು ನಾಪತ್ತೆಯಾಗಿರುವ ಡಾ.ರವಿಕುಮಾರ್ನ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.