ಬಿಹಾರ್ : ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕೊಲ್ಕತ್ತಾದಲ್ಲಿ ಯುವತಿ ಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ನಡೆದಿತ್ತು. ಇದೀಗ ಬಿಹಾರದಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಗೃಹ ರಕ್ಷಕ ದಳ ನೇಮಕಾತಿಯಲ್ಲಿ ಪ್ರಜ್ಞೆ ತಪ್ಪಿದ ಮಹಿಳೆಯ ಮೇಲೆ ಆಂಬುಲೆನ್ಸ್ ನಲ್ಲಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಹೌದು ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಗಯಾದಲ್ಲಿ ಹೋಮ್ ಗಾರ್ಡ್ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಮೂರ್ಛೆ ಹೋದ ನಂತರ ಆ ಮಹಿಳೆಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಯಿತು. ಆ್ಯಂಬುಲೆನ್ಸ್ ಒಳಗೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಶಾಕಿಂಗ್ ಘಟನೆ ನಡೆದಿದೆ.
ಪ್ರಜ್ಞೆ ತಪ್ಪಿದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಚಾಲಕ ಮತ್ತು ತಂತ್ರಜ್ಞನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಆ್ಯಂಬುಲೆನ್ಸ್ ಚಲಾಯಿಸುತ್ತಿದ್ದ ಗಯಾದ ಉಟ್ರೆನ್ ಗ್ರಾಮದ ವಿನಯ್ ಕುಮಾರ್ ಮತ್ತು ನಳಂದ ಜಿಲ್ಲೆಯ ಚಂದನ್‌ಪುರ ಗ್ರಾಮದ ಅಜಿತ್ ಕುಮಾರ್ ಅವರನ್ನು ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಬೇಕಾಗುತ್ತದೆ ಎಂದು ಹೋಮ್ ಗಾರ್ಡ್ ನೇಮಕಾತಿ ಸ್ಥಳದಲ್ಲಿ ಆ್ಯಂಬುಲೆನ್ಸ್ ಅನ್ನು ನಿಲ್ಲಿಸಲಾಗಿತ್ತು. ನೇಮಕಾತಿಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರೂ ಆ್ಯಂಬುಲೆನ್ಸ್‌ನಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಬೋಧ್ ಗಯಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 70(1)ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.