ಹಾವೇರಿ : ವಿದ್ಯಾರ್ಥಿಯೋರ್ವ 500 ರೂಪಾಯಿ ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಕಿಡ್ನ್ಯಾಪ್ ಮಾಡಿ ಅನ್ನ, ನೀರು ಕೊಡದೆ ಕಂಬಕ್ಕೆ ಕಟ್ಟಿ ಬಾಸುಂಡೆ ಬರುವ ಹಾಗೆ ಹಲ್ಲೆ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದಂತ ವಿದ್ಯಾರ್ಥಿಯನ್ನು ತಿಮ್ಮಾಪುರ ಗ್ರಾಮದ ಎಸ್ವಿಎಲ್ಪಿ ಸರ್ಕಾರಿ ಪ್ರೌಡ ಶಾಲೆಯ ನಾಗರಾಜ್ ಶೇಖರ್ ಮೈಸೂರ್ (15) ಎಂದು ತಿಳಿದುಬಂದಿದೆ.ಮಂಜುನಾಥ್ ಬಗಾಡೆ ಅವರ ಮನೆಯಲ್ಲಿ ವಿದ್ಯಾರ್ಥಿ 500 ರೂಪಾಯಿ ಕದ್ದ ಎಂಬ ಅನುಮಾನದಿಂದ ಹಲ್ಲೆ ಮಾಡಿದ್ದಾರೆ. ಗಣಪತಿ ಗುಣೋಜಿ, ಮಂಜುನಾಥ್ ಬಗಾಡೆ ಎನ್ನುವ ಆರೋಪಿಗಳು ಹಲ್ಲೆ ಮಾಡಿದ್ದಾರೆ.
ಆರೋಪಿಗಳು ಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ಪಡೆಯದೇ ನಿನ್ನೆ ಮಧ್ಯಾಹ್ನ 1 ಗಂಟೆಗೆ ತರಗತಿಗೆ ನುಗ್ಗಿ,ಓಮ್ನಿ ವಾಹನದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ಶಾಲೆಯಿಂದ ಕೊರಳಪಟ್ಟಿ ಹಿಡಿದು ಕರೆದೊಯ್ದು ತೋಟದ ಮನೆಯಲ್ಲಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.ಈ ಕುರಿತು ವಿದ್ಯಾರ್ಥಿ ನಾಗರಾಜ್ ತಂದೆ ಶೇಖರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.