ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಚಿಕ್ಕ ಮಕ್ಕಳು ಎನ್ನದೆ ಎಲ್ಲರ ಮೇಲು ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಇದೀಗ ಆರೋಗ್ಯ ಇಲಾಖೆ ಬೆಚ್ಚಿಬಿಳಿಸುವ ಮಾಹಿತಿ ನೀಡಿದ್ದು, ಕಳೆದ ಆರೇ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 2.3 ಲಕ್ಷಕ್ಕೂ ಅಧಿಕ ನಾಯಿ ಕಡಿತ ಪ್ರಕರಣ, 19 ರೇಬೀಸ್ ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಹೌದು 2025ರ ಜ.1ರಿಂದ ಜೂ.30ರ ನಡುವೆ 2,31,091 ನಾಯಿ ಕಡಿತ ವರದಿಯಾಗಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 1,69,672 ನಾಯಿ ಕಡಿತ ಮತ್ತು 18 ರೇಬೀಸ್ ಸಾವು ವರದಿಯಾಗಿದ್ದವು. 2024ರಲ್ಲಿ ರಾಜ್ಯದಲ್ಲಿ ಇಡೀ ವರ್ಷದಲ್ಲಿ 3.6 ಲಕ್ಷ ನಾಯಿ ಕಡಿತ ಹಾಗೂ 42 ರೇಬೀಸ್ ಸಾವು ಸಂಭವಿಸಿದ್ದವು. 2023ರ ಮೊದಲ ಆರು ತಿಂಗಳ ಅವಧಿಗೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.36.20ರಷ್ಟು ಹೆಚ್ಚಳ ಕಂಡುಬಂದಿದೆ.
ನಾಯಿ ಕಡಿತವನ್ನು ಅಧಿಸೂಚಿತ ಕಾಯಿಲೆ ಪಟ್ಟಿಗೆ 2022ರಲ್ಲಿ ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿತ್ತು. ಅದಾದ ನಂತರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ನಾಯಿ ಕಡಿತ ಹಾಗೂ ದೃಢಪಟ್ಟ ರೇಬೀಸ್ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ವರದಿ ಮಾಡುತ್ತಿವೆ. 2022ರ ನಂತರ ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಈ ವರ್ಷ ವರದಿಯಾಗಿವೆ.