ಕೊಡಗು : ಕೊಡಗಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಕಳೆದ ಮೂರು ತಿಂಗಳಿನಲ್ಲಿ 59 ಅಪ್ರಾಪ್ತೆಯರು ಗರ್ಭಿಣಿ ಆಗಿರುವ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ಕಳೆದ 9 ತಿಂಗಳಲ್ಲಿ 30 ಬಾಲಕಿಯರು ಗರ್ಭಿಣಿಯಾಗಿದ್ದು, ಅದರಲ್ಲಿ 14 ಬಾಲಕಿಯರಿಗೆ ಈಗಾಗಲೇ ಹೆರಿಗೆ ಆಗಿರುವುದು ಬೆಳಕಿಗೆ ಬಂದಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಹೌದು ಕೊಡಗು ಜಿಲ್ಲೆಯಲ್ಲಿ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 59 ಪ್ರಕರಣಗಳು ದಾಖಲಾಗಿವೆ. 9 ತಿಂಗಳಲ್ಲಿ 30 ಅಪ್ರಾಪ್ತೆಯರು ಗರ್ಭಿಣಿ ಆಗಿರುವುದು ಪತ್ತೆಯಾಗಿದೆ. 30 ಅಪ್ರಾಪ್ತೆಯರ ಪೈಕಿ ಈಗಾಗಲೇ 14 ಬಾಲಕಿಯರಿಗೆ ಹೆರಿಗೆ ಆಗಿದೆ. ಓರ್ವ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಆಗಿರುವುದು ಕೂಡ ಪತ್ತೆಯಾಗಿದೆ.
ವಿರಾಜಪೇಟೆ, ಪೊನ್ನಂಪೇಟೆಯಲ್ಲಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲೇ 43 ಸಂತ್ರಸ್ತೆಯರು ಪತ್ತೆಯಾಗಿದ್ದಾರೆ. 43 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ತೋಟದ ಮನೆಗಳಲ್ಲಿ ಹೆಚ್ಚು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಐದು ಬಾಲ ವಿವಾಹ ಪ್ರಕರಣಗಳು ಇದೆ ವೇಳೆ ಬೆಳಕಿಗೆ ಬಂದಿವೆ. ಬಾಲಕಿಯರು ಗರ್ಭಿಣಿ ಆಗಿರುವ ಪ್ರಕರಣದಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇಂಥ ಪ್ರಕರಣ ತಡೆಗಟ್ಟಲು ವಿಶೇಷ ಕಾರ್ಯಕ್ರಮಗಳಿಗೆ ಚಿಂತನೆ ನಡೆಸುತ್ತಿದ್ದು, ಈಗಾಗಲೇ ಕೊಡಗು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆದಿದೆ.