ಹಾಸನ : ಇತ್ತೀಚಿಗೆ ಹೃದಯಾಘಾತದಿಂದ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಅದರಲ್ಲೂ ರಾಜ್ಯದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದೇ ತಿಂಗಳಿನಲ್ಲಿ 19ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನಿನ್ನೆ ಸಹ ಹಾಸನದಲ್ಲಿ ಹೃದಯಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಹೌದು ಹಾಸನ ಜಿಲ್ಲೆಯಲ್ಲಿ ನಿನ್ನೆ ಹೃದಯಘಾತಕ್ಕೆ ಆಟೋ ಚಾಲಕರೊಬ್ಬರು ಬಲಿಯಾಗಿದ್ದು, ಹೃದಯಾಘಾತದಿಂದ ಗೋವಿಂದ (37) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಿದ್ಧೇಶ್ವರ ನಗರ ನಿವಾಸಿಯಾಗಿರುವ ಗೋವಿಂದ ಅವರು ಆಟೋ ಚಾಲಕ ರಾಗಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಗೋವಿಂದ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಆಟೋ ಚಲಾಯಿಸುವಾಗ ಎದೆ ನೋವು ಕಾಣಿಸಿಕೊಂಡಿದೆ.
ಕೂಡಲೇ ಆಟೋ ಚಲಾಯಿಸಿಕೊಂಡು ಗೋವಿಂದ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಗೋವಿಂದ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಂದು ತಿಂಗಳ ಅಂತರದಲ್ಲಿ ಇದೀಗ 19 ಜನ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕ ಮನೆ ಮಾಡಿದೆ. ದಿನೇ ದಿನೇ ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಜನರನ್ನು ಭಯಭೀತಗೊಳಿಸಿದೆ.
ಹೃದಯಾಘಾತಕ್ಕೆ ‘ಬಿಎಂಟಿಸಿ’ ಕಂಡಕ್ಟರ್ ಬಲಿ!
ಇನ್ನು ಹಾಸನದಲ್ಲಿ ಹೃದಯಾಘಾತಕ್ಕೆ ನಿನ್ನೆ ಮತ್ತೋರ್ವ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ. 41 ವರ್ಷದ ಬಸ್ ಕಂಡಕ್ಟರ್ ಓರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಗಿರೀಶ್ (41) ಮೃತ ದುರ್ದೈವಿ. ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ್, ಇಂದು ರಜೆ ಇದ್ದ ಕಾರಣಕ್ಕೆ ಊರಿಗೆ ಬಂದಿದ್ದರು. ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದಲ್ಲಿ ಗಿರೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೊಲದಲ್ಲಿ ಜೋಳ ಬೆಳೆಗೆ ಗೊಬ್ಬರ ಹಾಕಿ ಮನೆಗೆ ವಾಪಸ್ ಆಗಿದ್ದ ಗಿರೀಶ್, ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.