ಬೆಂಗಳೂರು : ರೈಲು ಹರಿದು ಕೈ ಕಟ್ ಆಗಿದ್ದರೂ ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಬೇಡ ಅಂತ ಅಂಬುಲೆನ್ಸ್‌ನಿಂದ ಜಿಗಿದು ರಸ್ತೆಯಲ್ಲಿ ಓಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಕುಂಬಾರ ಬೀದಿಯಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ದಿಲೀಪ್ ರಾತ್ರಿ ರೈಲ್ವೆ ಹಳಿ ಮೇಲೆ ಮತ್ತಿನಲ್ಲಿ ಬಿದ್ದಿದ್ದಾಗ ರೈಲು ಹರಿದು ಕೈ ಕಟ್ ಆಗಿತ್ತು. ಇದನ್ನ ಕಂಡ ಸ್ಥಳೀಯರು ತುಂಡಾಗಿದ್ದ ಕೈಯನ್ನ ಕವರ್‌ಗೆ ಹಾಕಿಕೊಂಡು ಕೂಡಲೇ 108 ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯರು ಕಷ್ಟಪಟ್ಟು ಆಂಬುಲೆನ್ಸ್ ಹತ್ತಿಸಿ ಆಸ್ಪತ್ರೆಗೆ ಕಳಿಸಿದರೆ ಗಾಂಜಾ ನಶೆಯಲ್ಲಿದ್ದ ಯುವಕ ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಅಂಬುಲೆನ್ಸ್‌ನಿಂದ ಇಳಿದು ಎಸ್ಕೇಪ್ ಆಗಿದ್ದಾನೆ.
ಕೈ ಕಟ್ ಆದರೂ ಅಡ್ಡಾಡುತ್ತಿದ್ದ ದಿಲೀಪ್ನನ್ನು ನೋಡಿದ ಸ್ಥಳೀಯರು, ಆತನನ್ನು ಆಂಬ್ಯುಲನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆಗ ಆತ ರಸ್ತೆ ಮಧ್ಯೆಯೇ ಆಂಬ್ಯುಲನ್ಸ್ನಿಂದ ಜಿಗಿದು ಓಡಿ ಹೋಗಿದ್ದ. ದೇವನಹಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ತಪ್ಪಿಸಿಕೊಂಡು ಬಳಿಕ ಕುಂಬಾರ ಬೀದಿಯ ಮನೆಗಳನ್ನು ಸೇರಿಕೊಂಡಿದ್ದ. ನಂತರ ಪೊಲೀಸರು 1 ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಹುಡುಕಿ, ಬಳಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಮೂರು ಮೂರು ಬಾರಿ ಆಂಬ್ಯುಲನ್ಸ್ ಹತ್ತಿಸಿದರೂ ಓಡಿ ಹೋಗಲು ಯತ್ನಿಸುತ್ತಿದ್ದ ಈತನನ್ನು ಪೊಲೀಸರು ಹರಸಾಹಸಪಟ್ಟು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಅಲ್ಲೂ ಕೂಡ ಕಟ್ ಕೈಗೆ ಬ್ಯಾಂಡೇಜ್ ಹಾಕಿಸಿಕೊಳ್ಳಲು ಮೊಂಡಾಟ ಮಾಡಿದ್ದ. ತನ್ನ ಬಳಿ ಹಣವಿಲ್ಲ ಚಿಕಿತ್ಸೆ ಕೊಡಬೇಡಿ ಎಂದು ಡ್ರಾಮಾ ಮಾಡುತ್ತಿದ್ದ. ಬಳಿಕ ಪೊಲೀಸರ ಎಚ್ಚರಿಕೆಯಿಂದ ಕೈಗೆ ಡ್ರೆಸ್ಸಿಂಗ್ ಮಾಡಿಸಿಕೊಂಡಿದ್ದಾನೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ.








