ಬೆಂಗಳೂರು : ಪತಿಯ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನ ಕೊಂದು, ಬಳಿಕ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಜಯ್ ನಗರದ ಕೃಷ್ಣಪ್ಪ ಲೇಔಟ್‌ನಲ್ಲಿ ಗುರುವಾರ ಸಂಜೆ 7:30 ಸುಮಾರಿಗೆ ಘಟನೆ ನಡೆದಿದ್ದು, ಸೀತಾ (29) ಹಾಗೂ ಮಗಳು ಸೃಷ್ಟಿ (4) ಸಾವನ್ನಪ್ಪಿದ್ದಾರೆ. ಸಂಜಯ್ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನೇಪಾಳ ಮೂಲದ ಗೋವಿಂದ್ ಬಹದ್ದೂರ್ ಹಾಗೂ ಸೀತಾ ದಂಪತಿ ಇಲ್ಲಿನ ಸಂಜಯ್ ನಗರದ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲಿಯೇ ದಂಪತಿ ವಾಸಿಸಲು ಸಣ್ಣ ಮನೆ ನೀಡಲಾಗಿತ್ತು. ಆಗಾಗ ನೇಪಾಳಕ್ಕೆ ಹೋಗುತ್ತಿದ್ದ ಗೋವಿಂದ್ ಬಹದ್ದೂರ್ ಐದಾರು ತಿಂಗಳಾದರೂ ವಾಪಸ್ ಬರುತ್ತಿರಲಿಲ್ಲ. ಅದೇ ವಿಚಾರವಾಗಿ ಪತಿ – ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.
ಇದರಿಂದ ರೋಸಿ ಹೋಗಿದ್ದ ಪತ್ನಿ ಸೀತಾ, ನಿನ್ನೆ ಸಂಜೆ ಸಹ ಪತಿಯೊಂದಿಗೆ ಫೋನ್ ಕರೆಯಲ್ಲಿ ಜಗಳವಾಡಿಕೊಂಡಿದ್ದಳು. ಬಳಿಕ ತಾನು ಹಾಗೂ ಪುತ್ರಿಯ ಮೇಲೆ ಪೆಟ್ರೊಲ್ ಸುರಿದುಕೊಂಡು ಬೆಂಕಿಯಿಟ್ಟುಕೊಂಡಿದ್ದರು. ಘಟನೆಯಲ್ಲಿ ಸೀತಾ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ಪುತ್ರಿ ಸೃಷ್ಟಿಯನ್ನ ಅಕ್ಕಪಕ್ಕದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಪುತ್ರಿ ಸಹ ಇಂದು ಬೆಳಗ್ಗೆ ಅಸುನೀಗಿದ್ದಾಳೆ.








