ರಾಮನಗರ : ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪತ್ರ ಬರೆದು ವಿದ್ಯಾರ್ಥಿಯೋರ್ವ ಮನೆ ಬಿಟ್ಟು ಹೋಗಿದ್ದ ಘಟನೆ ನಡೆದಿತ್ತು. ಇದೀಗ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕೂಡ ಅಂತಹ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯೋರ್ವ 8 ವರ್ಷದ ಬಳಿಕ ನಾನು ಮತ್ತೆ ಬರುತ್ತೇನೆ ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾನೆ.
ಹೌದು ಕನಕಪುರ ತಾಲೂಕಿನ ದಾಳೇಗೌಡ ಎನ್ನುವವರ ಮಗ ತೇಜಸ್ (14) ಮನೆ ಬಿಟ್ಟು ಹೋದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈತ ಕನಕಪುರದ ಎಸ್ಎನ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ನಾನು ಎಂಟು ವರ್ಷದ ಬಳಿಕ ಮತ್ತೆ ಬರುತ್ತೇನೆ ಎಂದು ಪತ್ರ ಬರೆದಿದ್ದಾನೆ.
ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದ ಬಾಲಕ ಏಕಾಏಕಿ ಪತ್ರದಲ್ಲಿ ನಾನು 8 ವರ್ಷದ ಬಳಿಕ ಮತ್ತೆ ಬರುತ್ತೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಅಕಸ್ಮಾತ್ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನಾನು ಸತ್ತಂತೆ ಎಂದು ಭಾವಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿ ಬಾಲಕ ನಾಪತ್ತೆಯಾಗಿದ್ದಾನೆ. ಈ ಕುರಿತು ಬಾಲಕನ ತಂದೆ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.