ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡು ಪತ್ನಿ ಭುವನೇಶ್ವರಿ ಅವರನ್ನು ಪತಿ ಬಾಲ ಮುರುಗನ್ ಗುಂಡಿಕ್ಕಿ ಕೊಂದ ಪ್ರಕರಣ ಬೆಂಗಳೂರಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭುವನೇಶ್ವರಿ ಅವರು ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಬಾಲ ಮುರುಗನ್, ಪತ್ನಿಯನ್ನೇ ಮುಗಿಸಲು ಸಂಚು ರೂಪಿಸಿದ್ದನು. ಕಳೆದ ದಿನ ಭುವನೇಶ್ವರಿ ಅವರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ರಾತ್ರಿಯಿಂದಲೂ ಬಾಲ ಮುರುಗನ್‌ನನ್ನು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿದೆ. ಕೊಲೆಯ ಸಂಚು ರೂಪಿಸಿದ ದಿನದಿಂದ ಹಿಡಿದು, ಆಯುಧ ಪೂರೈಸಿದವರ ವರೆಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಯು ಬಳಸಿದ ಆಯುಧ ಅಕ್ರಮ ಎಂದು ಸಾಬೀತಾದಲ್ಲಿ, ಆಯುಧ ಕಾಯ್ದೆಯಡಿ (Arms Act) ಮತ್ತಷ್ಟು ಕಠಿಣ ಸೆಕ್ಷನ್‌ಗಳನ್ನು ಹಾಕಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಸ್ಥರ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗುತ್ತಿದೆ.








