ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಮರ್ಡರ್ ಆಗಿದ್ದು, ಹಣಕಾಸಿನ ವಿಚಾರಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿ ಮೇಲೆ ಹಲ್ಲೆ ಮಾಡಿ ಆಕೆಯ ಕುತ್ತಿಗೆಗೆ ಕಾಲಿನಿಂದ ಹಿಸುಕಿ ಹತ್ಯೆ ಮಾಡಿದ ಆರೋಪದಡಿ ಪತಿಯನ್ನು ಪೀಣ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾವ್ಯ (35) ಎಂಬುವರನ್ನು ಹತ್ಯೆ ಮಾಡಿರುವ ಆರೋಪದಡಿ ಧರಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಬೆಳಗಾವಿ ಮೂಲದ ಕಾವ್ಯ 15 ವರ್ಷಗಳ ಹಿಂದೆ ಧರಿಯಪ್ಪನೊಂದಿಗೆ ಮದುವೆಯಾಗಿದ್ದರು. ನಾಗಸಂದ್ರದ ರುಕ್ಮಿಣಿ ನಗರದಲ್ಲಿ ಕುಟುಂಬ ವಾಸವಾಗಿತ್ತು. ನಿನ್ನೆ ಮಧ್ಯಾಹ್ನ ಹಣಕಾಸಿನ ವಿಚಾರಕ್ಕಾಗಿ ಗಲಾಟೆಯಾಗಿದೆ. ಜಗಳ ಮಿತಿ ಮೀರಿದ್ದು, ಪತ್ನಿ ಮೇಲೆ ಹಲ್ಲೆ ಮಾಡಿ ಕಾಲಿನಿಂದ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಯು ತನ್ನ ಅಣ್ಣನಿಗೆ 2 ಲಕ್ಷ ಕೊಡುವ ಸಲುವಾಗಿ ಹಣವನ್ನು ಮನೆಯಲ್ಲಿಸಿದ್ದ. ಈ ವಿಚಾರ ತಿಳಿದು ಪತಿಯೊಂದಿಗೆ ಪತ್ನಿ ಜಗಳವಾಡಿದ್ದರು. ಅಲ್ಲದೇ, ಕೆಲ ತಿಂಗಳಿಂದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಜಗಳವಾಗಿತ್ತು. ಸಂಬಂಧಿಕರು ಮಧ್ಯ ಪ್ರವೇಶಿಸಿ ಗಲಾಟೆ ತಿಳಿಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿ ಆರೋಪಿ ವಿಚಾರಣೆ ನಡೆಸಲಾಗುತ್ತಿದೆ.








