ದಕ್ಷಿಣಕನ್ನಡ : ತಲೆನೋವಿಗೆಂದು ಮನೆಯಲ್ಲಿದ್ದ ಔಷಧ (ಸಿರಪ್) ಸೇವಿಸಿದ್ದ ಬಾಲಕ ಮೃತಪಟ್ಟ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ಮಾ. 18ರಂದು ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕೊಂಡ್ಯಾಡಿ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ರಾಮಕುಂಜದ ಖಾಸಗಿ ಶಾಲಾ 5ನೇ ತರಗತಿ ವಿದ್ಯಾರ್ಥಿ ಚಿರಾಗ್ ಎಸ್. (10) ಮೃತಪಟ್ಟ ಬಾಲಕ. ಆತನಿಗೆ ಪದೇ ಪದೆ ತಲೆನೋವು ಕಾಣಿಸಿಕೊಳ್ಳುತ್ತಿದ್ದು, ಮಾ. 18 ರಂದು ಸಂಜೆ ತಲೆನೋವಿಗೆಂದು ಮನೆಯಲ್ಲಿದ್ದ ಔಷಧ ಕುಡಿದಿದ್ದ. ಬಳಿಕ ಮನೆಯಲ್ಲಿ ಬಾಲಕ ಹೊರಳಾಡುತ್ತಿರುವುದನ್ನು ಕಂಡ ಬಾಲಕನ ತಾಯಿ ಕೂಡಲೇ ತನ್ನ ಪತಿಗೆ ತಿಳಿಸಿದ್ದಾರೆ.
ಮಗನನ್ನು ಸ್ಥಳೀಯವಾಗಿ ವೈದ್ಯರಲ್ಲಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯಲಾಯಿತು. ಅಲ್ಲಿನ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಸಂಜೀವ ಪೂಜಾರಿ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








