ಬೆಂಗಳೂರು: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪ್ರೇಮಿಗಳಿಬ್ಬರು ಲಾಡ್ಜ್ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಪರಿಣಾಮ ರೆಸ್ಟೋರೆಂಟ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಬೆಂಗಳೂರಿನ ಯಲಹಂಕ ನ್ಯೂ ಟೌನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಗ್ನಿ ದುರಂತದಲ್ಲಿ ಗದಗ ಮೂಲದ ರಮೇಶ್ ಮತ್ತು ಕಾವೇರಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಪ್ರೇಮಿಗಳಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇಬ್ಬರೂ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಿಚನ್-6 ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲಾಡ್ಜ್ಗೆ ಬಂದಿದ್ದರು. ಲಾಡ್ಜ್ನಲ್ಲಿ ಕೊಠಡಿ ಪಡೆದ ಕೆಲವೇ ಸಮಯದಲ್ಲಿ, ಪೆಟ್ರೋಲ್ ತಂದು ತಮ್ಮ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆ ನಾ ಅಥವಾ ಬೆಂಕಿಯ ಅವಘಡ ದಿಂದ ನಡೆದಿರೋದಾ ಅನ್ನೋದು ತಿಳಿದುಬರಬೇಕಿದೆ.