ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ದಾರುಣ ಘಟನೆ ನಡೆದಿದ್ದು, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ, ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಪತಿಯ ಶವದೊಂದಿಗೆ 10 ದಿನಗಳ ಕಾಲ ವಾಸವಾಗಿದ್ದರು. ಪತಿ ಸತ್ತಿರುವುದೇ ತಿಳಿಯದ ಆಕೆ, ಕೊಳೆತ ಶವದ ವಾಸನೆಯಿಂದಾಗಿ ಅಕ್ಕಪಕ್ಕದವರು ಗಮನಿಸಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.
77 ವರ್ಷದ ಸಿರಿಲ್ ಮೋನಿಸ್ ಅವರು ವಯೋಸಹಜ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಆದರೆ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ಪತ್ನಿಗೆ ತನ್ನ ಪತಿ ಮೃತಪಟ್ಟಿದ್ದಾರೆಂಬ ಎಂಬ ಕನಿಷ್ಠ ಜ್ಞಾನವೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಪತಿ ಬದುಕಿದ್ದಾರೆ, ಮಲಗಿದ್ದಾರೆಂದೇ ಭಾವಿಸಿ ಪತ್ನಿ ಪತಿಯ ಶವದ ಪಕ್ಕದಲ್ಲೇ 10 ದಿನ ಕಳೆದಿದ್ದಾರೆ ಎಂಬುದು ಎಂಥವರಿಗೂ ದಿಗಿಲು ಹುಟ್ಟಿಸುತ್ತದೆ..
ಮೃತ ಮೋನಿಸ್ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನಂತೆ. ಆದರೆ ಪ್ರತಿ ಸಲ ಮಗ ಫೋನ್ ಮಾಡಿ ಅಪ್ಪನ ಬಗ್ಗೆ ವಿಚಾರಿಸಿದಾಗ ಮಾನಸಿಕ ಅಸ್ವಸ್ಥ ತಾಯಿ ಮಾತ್ರ ‘ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ’ ಎಂದೇ ಹೇಳುತ್ತಿದ್ದಳಂತೆ. ಇದರಿಂದ ಮಗನೂ ಅಪ್ಪ ಮೃತಪಟ್ಟಿರುವ ಬಗ್ಗೆ ತಿಳಿದಿಲ್ಲ.








