ಬಳ್ಳಾರಿ : ಹೂವಿನಹಡಗಲಿಯ ಬೀರಬ್ಬಿಯಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಚೀಲದಲ್ಲಿ ಪೀಸ್ ಪೀಸ್ ಆಗಿ ಸಿಕ್ಕ ವ್ಯಕ್ತಿಯ ಮೃತದೇಹದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಈ ಪ್ರಕರಣದಲ್ಲಿ ಆರೋಪಿ ಎಂಬುದು ಗೊತ್ತಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬೀರಬ್ಬಿ ಗ್ರಾಮದ ಬೀರೇಶ (25) ಕೊಲೆಯಾಗಿದ್ದ ಯುವಕ. ಆತನ ತಂದೆ ಲಕ್ಷ್ಮಪ್ಪ (55) ಹತ್ಯೆಗೈದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಕುಮ್ಮಕ್ಕು ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಸುಮಾರು 15 ದಿನಗಳ ಹಿಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಎಸೆದಿದ್ದ.
ಎರಡು ದಿನಗಳ ಹಿಂದೆ ವಾಸನೆ ಬಂದಿದ್ದು, ಸ್ಥಳೀಯರು ನೋಡಿದಾಗ ಬೀರೇಶನ ಶವ ಗುರುತು ಸಿಗದಂತೆ ಕೊಳೆತ ಸ್ಥಿತಿಯಲ್ಲಿ ಮೂಳೆಗಳು ಮಾತ್ರ ಪತ್ತೆಯಾಗಿದ್ದವು. ಪ್ರಕರಣ ಬೆಳಕಿಗೆ ಬಂದು 24 ಗಂಟೆಯಲ್ಲಿ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ತಾನೇ ಕೊಲೆಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಹೀರೆಹಡಗಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.








