ಬೆಂಗಳೂರು : ಬಾತ್ ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥಗೊಂಡಿದ್ದ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೋವಿಂದರಾಜ ನಗರ ವ್ಯಾಪ್ತಿಯ ಪಂಚಶೀಲ ನಗರದಲ್ಲಿ ಸೋಮವಾರ ಈ ಘಟನೆ ನಡೆದಿದ್ದು ತಾಯಿ ಚಾಂದಿನಿ (26) ಹಾಗೂ ಮಗು ಯುವಿ (4) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ತಾಯಿ ಮತ್ತು ಮಗು ನಿನ್ನೆ ಮಧ್ಯಾಹ್ನ ಸ್ನಾನಕ್ಕೆಂದು ಹೋದಾಗ ಗೀಸರ್‌ನಿಂದ ಸೋರಿಕೆಯಾಗಿದ್ದ ಗ್ಯಾಸ್ ಸೇವಿಸಿ ಅಸ್ವಸ್ಥಗೊಂಡಿದ್ದರು. ತೀವ್ರವಾಗಿ ಅಸ್ವಸ್ಥರಾಗಿದ್ದ ತಾಯಿ ಮಗುವನ್ನ ಅಕ್ಕಪಕ್ಕದ ಮನೆಯವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಸಂಜೆ ವೇಳೆಗೆ ತಾಯಿ – ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಿಂದ ಬಂದ ವರದಿ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಗೋವಿಂದರಾಜ ನಗರ ಠಾಣೆ ಪೊಲೀಸರು, ತಪಾಸಣೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ.








