ದಾವಣಗೆರೆ : ಆತನಿಗೆ ಆನ್ಲೈನ್ ಗೇಮ್ ಆಡೋ ಚಟ. ಹಾಗಾಗಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ, ಆದರೆ ಮಾಡಿದ ತೀರಿಸಲು ವೃದ್ದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಪೊಲೀಸರು ಆರೋಪಿ ಯುವಕನನ್ನು ಬಂಧಿಸಿ, ದೋಚಿದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಒಂಟಿ ವೃದ್ಧೆ ಕಮಲಮ್ಮ (64) ಅವರ ಮನೆಗೆ ಫೆಬ್ರವರಿ 2ರ ರಾತ್ರಿ ಆರೋಪಿ ಅಭಿಷೇಕ (23) ನುಗ್ಗಿದ್ದ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ನಿವಾಸಿಯಾದ ಅಭಿಷೇಕ ಎಂದು ತಿಳಿದುಬಂದಿದೆ. ತಡರಾತ್ರಿ ಕಮಲಮ್ಮ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಸುಮಾರು 8.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಅಭಿಷೇಕ ಆನ್‌ಲೈನ್ ಗೇಮ್‌ಗಳಲ್ಲಿ ಅತಿಯಾಗಿ ಮುಳುಗಿ 20 ರಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ ಮನೆ ಬಿಟ್ಟು ಓಡಾಡುತ್ತಿದ್ದ ಅವನು, ರಾತ್ರಿ ವೇಳೆ ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದ. ಹಬ್ಬದ ಸಂದರ್ಭದಲ್ಲಿ ಆರುಂಡಿ ಗ್ರಾಮಕ್ಕೆ ತೆರಳಿದ್ದ ಅವನು, ಚಿನ್ನಾಭರಣ ಧರಿಸಿದ್ದ ಕಮಲಮ್ಮ ಅವರನ್ನು ಗುರುತಿಸಿ ಈ ಕೃತ್ಯ ನಡೆಸಿದ್ದಾನೆ.








