ಹೈದ್ರಾಬಾದ್ : ಕೆಲವರು ಸುಖಾಸುಮ್ಮನೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಹೈದರಾಬಾದ್ ನಲ್ಲಿ ಇದೀಗ ಅಂತದ್ದೇ ಘಟನೆ ನಡೆದಿದ್ದು, ಕುಟುಂಬಸ್ಥರು ಬೆಕ್ಕನ್ನು ಸಾಕೋದು ಬೇಡ ಎಂದಿದ್ದಕ್ಕೆ ಮನನೊಂದು 23 ವರ್ಷದ ವೈದ್ಯೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೌದು ಹೈದರಾಬಾದ್ನ ಅಲ್ವಾಲ್ ನಿವಾಸಿಯಾಗಿರುವ ವೈದ್ಯೆ ಟಿ ಪ್ರಿನ್ಸಿ ಅಲಿಯಾಸ್ ಶ್ರೇಷ್ಠ ಶುಕ್ರವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಿನ್ಸಿ ತನ್ನ ತಾಯಿ ಕುಸುಮಲತಾ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಕೆಲವು ವಾರಗಳ ಹಿಂದೆ, ಪ್ರಿನ್ಸಿ ಬೆಕ್ಕನ್ನು ಮನೆಗೆ ಕರೆತಂದಿದ್ದರು. ನಂತರ ಅವರು ನಿರಂತರವಾಗಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಬೆಕ್ಕನ್ನು ಸಾಕುವುದು ಬೇಡ ಎಂದು ಕುಟುಂಬಸ್ಥರು ವಿರೋಧಿಸಿದ್ದರು.
ಶುಕ್ರವಾರ ವೈದ್ಯೆಯ ತಾಯಿ ಮತ್ತು ಅಜ್ಜಿ ಕೆಲಸಕ್ಕೆ ಹೋಗಿದ್ದರು. ಅವರು ಸಂಜೆ ಹಿಂತಿರುಗಿದಾಗ, ಪ್ರಿನ್ಸಿ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಗೊತ್ತಾಗಿದೆ. ಅವರು ಎಂಬಿಬಿಎಸ್ ನಂತರ ಉನ್ನತ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಅವರು ಬೆಕ್ಕನ್ನು ಸಾಕುತ್ತಿದ್ದರು. ಆದರೆ, ಆಕೆಯ ಪೋಷಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಆಕೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.








