ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ನಡುಕ ಹುಟ್ಟಿಸುವ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ 23 ವರ್ಷದ ಗರ್ಭಿಣಿ ಪತ್ನಿಯ ಗುಪ್ತಾಂಗಕ್ಕೆ ಹ್ಯಾಕ್ಸಾ ಬ್ಲೇಡ್ (ಕಬ್ಬಿಣ ಕತ್ತರಿಸುವ ಬ್ಲೇಡ್) ಚುಚ್ಚಿ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ (PTI) ಪ್ರಕಾರ, ಮಣಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಿತ್ತಿಕಲಾ ಗ್ರಾಮದಲ್ಲಿ ಮೇ 14 ರಂದು ಈ ಘಟನೆ ನಡೆದಿದೆ.
ಪ್ರದೀಪ್ ಅಗರಿಯಾ ಎಂದು ಗುರುತಿಸಲಾದ ಆರೋಪಿಯನ್ನು ಭಾನುವಾರ ಅಂಬಿಕಾಪುರದಲ್ಲಿ ಬಂಧಿಸಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
”ಪ್ರಾಥಮಿಕ ಮಾಹಿತಿಯ ಪ್ರಕಾರ, ಅಗರಿಯಾ ಮತ್ತು ಹೀರಬಾಯಿ ಅವರಿಗೆ ಸುಮಾರು ಐದು ವರ್ಷಗಳ ಹಿಂದೆ ಮದುವೆಯಾಗಿತ್ತು. ಆರೋಪಿಯು ಮದ್ಯದ ಅಮಲಿನಲ್ಲಿ ಪತ್ನಿಯ ಮೇಲೆ ಪದೇ ಪದೇ ಹಲ್ಲೆ ನಡೆಸುತ್ತಿದ್ದನು. ಮೇ 14 ರಂದು ಆತ ಹೀರಬಾಯಿಗೆ ತೀವ್ರವಾಗಿ ಥಳಿಸಿ, ಆಕೆಯ ಗುಪ್ತಾಂಗಕ್ಕೆ ಹ್ಯಾಕ್ಸಾ ಬ್ಲೇಡ್ ಅನ್ನು ಚುಚ್ಚಿದ್ದಾನೆ. ದಂಪತಿಯ ನಾಲ್ಕು ವರ್ಷದ ಹೆಣ್ಣು ಮಗು ಮನೆಯಲ್ಲಿದ್ದಾಗಲೇ ಈ ಭೀಕರ ಕ್ರೌರ್ಯ ನಡೆದಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಹೀರಬಾಯಿ ಪ್ರಜ್ಞೆ ತಪ್ಪಿದ ನಂತರ, ಆರೋಪಿಯು ಆಕೆಯನ್ನು ಮೋಟಾರ್‌ಸೈಕಲ್‌ನಲ್ಲಿ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದನು. ಅಲ್ಲಿ ಆಕೆಗೆ ರಸ್ತೆ ಅಪಘಾತದಲ್ಲಿ ಗಾಯಗಳಾಗಿವೆ ಎಂದು ಸುಳ್ಳು ಹೇಳಿ ವೈದ್ಯರನ್ನು ದಾರಿ ತಪ್ಪಿಸಲು ಯತ್ನಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
”ಆದರೆ ವೈದ್ಯರು ಪರೀಕ್ಷಿಸಿದಾಗ ಆಕೆ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಹೀರಬಾಯಿ ಮೃತರಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅಗರಿಯಾ ಅಲ್ಲಿಂದ ಪರಾರಿಯಾಗಿದ್ದನು. ನಿಯಮಾವಳಿಗಳನ್ನು ಪೂರ್ಣಗೊಳಿಸಲು ಆಕೆಯ ಕಡೆಯವರು ಯಾರೂ ಇಲ್ಲದ ಕಾರಣ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿತ್ತು. ಮರುದಿನ ಮುಂಜಾನೆ ಆಕೆಯ ಸಂಬಂಧಿಕರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಮತ್ತು ಅದರ ವರದಿಯ ಆಧಾರದ ಮೇಲೆ ಅಗರಿಯಾ ವಿರುದ್ಧ ಪ್ರಕರಣ ದಾಖಲಿಸಲಾಯಿತು” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಂಬಿಕಾಪುರ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮರಣೋತ್ತರ ಪರೀಕ್ಷೆಯ ಸರ್ಜನ್ ಡಾ. ಸಂತು ಬಾಗ್ ಮಾತನಾಡಿ, ಸಂತ್ರಸ್ತೆ ಮೂರು ತಿಂಗಳ ಗರ್ಭಿಣಿಯಾಗಿದ್ದರು ಮತ್ತು ಆಕೆಯ ದೇಹದ ಮೇಲೆ ಹಲವು ಬಾಹ್ಯ ಗಾಯಗಳಾಗಿದ್ದವು ಎಂದು ತಿಳಿಸಿದ್ದಾರೆ.








