ಹೈದ್ರಾಬಾದ್ : ಇತ್ತೀಚಿಗೆ ಕಾಲೇಜು, ಹಾಸ್ಟೆಲ್ ಶೌಚಾಲಯದಲ್ಲಿ ಕ್ಯಾಮರಾ ಅಳವಡಿಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಹೈದರಾಬಾದ್ನ ತೆಲಂಗಾಣದ ಮೇಡ್‌ಚಲ್‌ದಲ್ಲಿ ಇರುವ ಸಿಎಂಆರ್ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್‌ನ ಶೌಚಾಲಯಗಳಲ್ಲಿ ಗೌಪ್ಯವಾಗಿ ವಿಡಿಯೊ ಚಿತ್ರೀಕರಿಸಲಾಗುತ್ತಿದೆ, ಅದನ್ನು ತಡೆಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಗುರುವಾರ ಪ್ರತಿಭಟನೆ ನಡೆಸಿದರು.
ಹೌದು ಗರ್ಲ್ಸ್ ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಹಾಸ್ಟೆಲ್ ವಾಶ್‌ರೂಮ್‌ನಲ್ಲಿ ಅಡುಗೆ ಸಿಬ್ಬಂದಿ ಹಿಡನ್ ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಇದೀಗ ಪ್ರತಿಭಟನೆಗೆ ಇಳಿದಿದ್ದಾರೆ. ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹಾಸ್ಟೆಲ್ ನಲ್ಲಿ ಡಿಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮ ಮುಗಿದ ಬಳಿಕ ಹುಡುಗಿಯರು ಹಾಸ್ಟೆಲ್‌ಗೆ ಹೋದಾಗ, ಅಲ್ಲಿ ಕ್ಯಾಮೆರಾ ಇರುವುದನ್ನು ಅವರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಬಾತ್ ರೂಂನ ವೆಂಟಿಲೇಟರ್‌ನಲ್ಲಿ ಕೈಗಳ ಗುರುತು, ಕನ್ನಡಿಯ ಮೇಲೆ ಹೊರಗಿನಿಂದ ಕ್ಯಾಮೆರಾ ಇಟ್ಟಿರುವ ಗುರುತುಗಳು ಪತ್ತೆಯಾಗಿವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಜೊತೆಗೆ ಕಳೆದ ಮೂರು ತಿಂಗಳಿನಿಂದ ಸುಮಾರು 300 ರೆಕಾರ್ಡಿಂಗ್‌ಗಳನ್ನು ಸೆರೆ ಹಿಡಿಯಲಾಗಿದೆ, ಇದೆಲ್ಲಾ ಅಡುಗೆ ಸಿಬ್ಬಂದಿಯೇ ಮಾಡಿರಬೇಕು ಎಂಬ ಸಂಶಯವಿದೆ ಎಂದಿದ್ದಾರೆ.
ಈ ಕುರಿತು ತೀವ್ರ ಮಟ್ಟದ ಪ್ರತಿಭಟನೆ ನಡೆದಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ಮೇಡ್ಚಿಲ್ ಮೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ. ತೆಲಂಗಾಣ ರಾಜ್ಯ ಮಹಿಳಾ ಆಯೋಗ ಕೂಡ ಪ್ರಕರಣದ ತನಿಖೆ ನಡೆಸುವಂತೆ ಸೈಬರಾಬಾದ್ ಪೊಲೀಸ್ ಕಮಿಷನರ್‌ಗೆ ನಿರ್ದೇಶಿಸಿದೆ.ಸದ್ಯ ವಿದ್ಯಾರ್ಥಿನಿಯರ ದೂರು ಸ್ವೀಕರಿಸಿದ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.