ಕೋಲಾರ : ಹಣ ಮನುಷ್ಯನನ್ನು ಯಾವ ರೀತಿ ಬೇಕಾದರೂ ಆಟ ಆಡಿಸುತ್ತದೆ ಹಾಗೂ ಯಾವ ಮಟ್ಟಕ್ಕಾದರೂ ಇಳಿಸುತ್ತದೆ. ಇದೀಗ ಕೋಲಾರದಲ್ಲಿ ಕೂಡ ಅಂತಹ ಘಟನೆ ನಡೆದಿದ್ದು ಹಣದ ಆಸೆಗಾಗಿ ಯುವಕನೊಬ್ಬ ಬೆಟ್ಟಿಂಗ್ ಕಟ್ಟಿ, ನೀರು ಬೆರೆಸದೇ ಐದು ಬಾಟಲ್ ಪೂರ್ತಿಯಾಗಿ ಮದ್ಯ ಸೇವಿಸಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಯುವಕ ಎಣ್ಣೆ ಪಾರ್ಟಿಯಲ್ಲಿ ಬಾಜಿ ಕಟ್ಟಿ 5 ಬಾಟಲಿ ಎಣ್ಣೆಯನ್ನು ನೀರು ಬೆರೆಸದೇ ಕುಡಿದಿದ್ದಾನೆ. ಆದರೆ, ದೇಹಕ್ಕೆ ಸೇರಿದ ಎಣ್ಣೆಯನ್ನು ಅರಗಿಸಿಕೊಳ್ಳಲಾಗದೇ ಜೀವ ಬಿಟ್ಟಿದ್ದಾನೆ. ಮೃತ ಯುವಕನನ್ನು ಕಾರ್ತಿಕ್ (21) ಎಂದು ತಿಳಿದುಬಂದಿದ್ದು, ಮದ್ಯ ಸೇವಿಸಿ ಸಾವನ್ನಪ್ಪಿದ್ದಾನೆ.
ಕಾರ್ತೀಕ ಹಣದ ಆಸೆಗಾಗಿ ಬೆಟ್ಟಿಂಗ್ ಕಟ್ಟಿ ನೀರು ಬೆರಸದೆ ಮದ್ಯ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ. ಐದು ಬಾಟಲ್ ಮದ್ಯಕ್ಕೆ ಒಂದು ಹನಿ ನೀರನ್ನೂ ಬೆರೆಸದೇ ಕುಡಿಯುವುದಾಗಿ ಎದುರಾಳಿ ವ್ಯಕ್ತಿಯೊಂದಿಗೆ 10 ಸಾವಿರ ರೂ. ಹಣಕ್ಕೆ ಬಾಜಿ ಕಟ್ಟಿದ್ದಾನೆ. ಇದೇ ಗ್ರಾಮದ ವೆಂಕಟರಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರೊಂದಿಗೆ ಬೆಟ್ಟಿಂಗ್ ಕಟ್ಟಿದ್ದಾರೆ.ಈ ವೇಳೆ ನೀನು 5 ಬಾಟಲಿ ಎಣ್ಣೆಯನ್ನು ನೀರು ಬೆರೆಸದೆ ನಾನೊಬ್ಬನೇ 10 ಸಾವಿರ ರೂ. ಕೊಡುವುದಾಗಿ ವೆಂಕಟರೆಡ್ಡಿ ಸವಾಲು ಹಾಕಿದ್ದಾರೆ.
ಮದ್ಯ ಸೇವನೆಯಲ್ಲಿ ನಾನು ಎಂದಿಗೂ ಸೋತಿಲ್ಲವೆಂದು ಕಾರ್ತಿಕ್ 5 ಬಾಟಲಿ ಮದ್ಯವನ್ನು ನೀರು ಬೆರೆಸದೇ ಸೇವಿಸಿದ್ದಾನೆ. ನಂತರ, ಮದ್ಯದ ಪ್ರಮಾಣ ಹೆಚ್ಚಾಗಿದ್ದರಿಂದ ತೀವ್ರ ಅಸ್ವಸ್ಥನಾದ ಕಾರ್ತಿಕ್, ನಾನು ಬದುಕುವುದಿಲ್ಲ ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಉಳಿಸಿ ಎಂದು ಬೇಡಿಕೊಂಡಿದ್ದಾನೆ. ತಕ್ಷಣ ಅವರು ಮುಳಬಾಗಿಲು ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸದೇ ಆತ ಸಾವನಪ್ಪಿದ್ದಾನೆ.
ಸದ್ಯ ಕಾರ್ತಿಕ ಕುಟುಂಬಸ್ಥರು ಬಾಜಿ ಕಟ್ಟಿದ 6 ಜನರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ, ನಂಗಲಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಮನೆಯವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ವೆಂಕಟರೆಡ್ಡಿ ಮತ್ತು ಸುಬ್ರಮಣಿ ಇಬ್ಬರನ್ನೂ ಬಂಧನ ಮಾಡಲಾಗಿದೆ. ಇವರೊಂದಿಗೆ ಬಾಜಿ ಕಟ್ಟಿದ್ದ ಇತರರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.