ಹೈದ್ರಾಬಾದ್ : ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಮನೆ ಊಟಕ್ಕಿಂತ ಸ್ಟ್ರೀಟ್ ಫುಡ್, ಜಂಕ್ ಫುಡ್ ಹಾಗೂ ಹೋಟೆಲ್ ಗಳಲ್ಲಿನ ಊಟ ನೆಚ್ಚಿನ ಆಹಾರವಾಗಿದೆ. ಆದರೆ ಈ ಒಂದು ಆಹಾರ ಪದ್ಧತಿ ನಮ್ಮ ದೇಹದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತದೆ ಎಂಬುದು ಅವರಿಗೆ ಅರಿವಿಲ್ಲ. ಇದೀಗ ಹೈದರಾಬಾದ್ ನಲ್ಲಿ ಮೊಮೋಸ್ ತಿಂದು ಓರ್ವ ಮಹಿಳೆ ಸಾವನಪ್ಪಿದ್ದು, 50 ಜನರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಹೌದು ಈ ಒಂದು ಘಟನೆ ಹೈದ್ರಾಬಾದ್ ನ ಬಂಜಾರ ಹಿಲ್ಸ್ ಪಿಎಸ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಸಿಗದಕುಂಟಾ ಬಸ್ತಿಯ ನಿವಾಸಿಯಾದ ರೇಷ್ಮಾ (29) ಎಂದು ತಿಳಿದುಬಂದಿದೆ. ರೇಷ್ಮಾ ಬೀದಿಬದಿ ಆಹಾರ ತಿಂದಿದ್ದಾಳೆ. ಆರೋಗ್ಯದಲ್ಲಿ ಏರುಪೇರು ಕಂಡುಬಂದ ಕೂಡಲೇ ಮನೆಯವರು ನಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಪ್ರತಿ ವಾರದಂತೆ ಈ ವಾರವೂ ನಂದಿನಗರದಲ್ಲಿ ಸಂತೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿ ತಯಾರಾದ ಮೊಮೊಸ್ ಗಳನ್ನು ಹಲವರು ಖರೀದಿಸಿ ತಿಂದರು. ಮೊಮೊಸ್ ತಿಂದು ಮನೆಗೆ ಹೋಗುತ್ತಿದ್ದವರಿಗೆಲ್ಲರಿಗೂ ಇದ್ದಕ್ಕಿದ್ದಂತೆ ವಾಂತಿ ಬೇಧಿಯಾಗಿ ತೀವ್ರ ಅಸ್ವಸ್ಥರಾದರು.ಮೊಮೊಸ್ ತಿಂದವರಲ್ಲಿ ಸುಮಾರು 10 ಮಂದಿ ಅಪ್ರಾಪ್ತರು ಕೂಡಾ ಇದ್ದಾರೆ ಎನ್ನಲಾಗಿದೆ.
ಕುಟುಂಬ ಸದಸ್ಯರು ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಸುಮಾರು 50 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೊಮೊಸ್ ಮಾರಾಟ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮೋಮಸ್ ಹೇಗೆ ತಯಾರಿಸಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.