ಬೆಳಗಾವಿ : ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕ ಅಶೋಕ ಪಟ್ಟಣ ಅವರ ಬೆಂಬಲದೊಂದಿಗೆ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಅವರು ಗೆಲುವು ಸಾಧಿಸಿದ್ದಾರೆ. ಆದರೆ, ಈ ಗೆಲುವಿನ ಸಂಭ್ರಮಾಚರಣೆ ಬಳಿಕ ಪಿಕೆಪಿಎಸ್ ಮಾಜಿ ಅಧ್ಯಕ್ಷರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಾಸಕ ಅಶೋಕ್ ಪಟ್ಟಣ ಆಪ್ತ ಗಿರಿಯಪ್ಪ ಗಂಟೋಟಿ(40) ಹೃದಯಾಘಾತದಿಂದ ಮೃತಪಟ್ಟವರು. ನಿನ್ನೆ ನಡೆದ ಚುನಾವಣೆಯಲ್ಲಿ ಮಲ್ಲಣ್ಣ ಯಾದವಾಡ ಗೆಲುವು ಸಾಧಿಸಿದ್ದರು. ಈ ವೇಳೆ ವಿಜಯೋತ್ಸವದಲ್ಲಿ ಗಿರಿಯಪ್ಪ ಗಂಟೋಟಿ ಪಾಲ್ಗೊಂಡಿದ್ದರು. ಆದರೆ, ರಾತ್ರಿ ಹೃದಯಾಘಾತದಿಂದ ಗಿರಿಯಪ್ಪ ಮೃತಪಟ್ಟಿದ್ದಾರೆ. ಈ ಘಟನೆಯು ರಾಮದುರ್ಗ ತಾಲೂಕಿನಾದ್ಯಂತ ಶೋಕದ ವಾತಾವರಣವನ್ನು ಸೃಷ್ಟಿಸಿದೆ.
ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿಯಾಗಿದ್ದ ಗಿರಿಯಪ್ಪ, ರಾಮದುರ್ಗ ತಾಲೂಕಿನಿಂದ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದ ಮಲ್ಲಣ್ಣ ಯಾದವಾಡ ಪರವಾಗಿ ಶಾಸಕ ಅಶೋಕ ಪಟ್ಟಣ ಜೊತೆಗೂಡಿ ಪ್ರಚಾರ ಮಾಡಿದ್ದರು. ಆದರೆ, ಗೆಲುವಿನ ಸಂಭ್ರಮದಲ್ಲೇ ಮೃತಪಟ್ಟಿರುವುದು ದುರಂತ.