ಮೈಸೂರು : ಮೈಸೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು ಪೂಜೆ ಮಾಡುವ ವೇಳೆ ಕುಸಿದು ಬಿದ್ದು ಅರ್ಚಕರು ಒಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ತಡರಾತ್ರಿ ನಡೆದಿದೆ. ಪೂಜೆ ವೇಳೆ ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಶಂಕರ ಉಪಾಧ್ಯಾಯ (55) ಮೃತರು ಎಂದು ತಿಳಿದು ಬಂದಿದೆ. ಅರ್ಚಕ ಕುಸಿದು ಬೀಳುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಂಧಕಾಸುರ ವಧೆ ಪೂಜೆ ಸಮಯದಲ್ಲಿ ಕುಸಿದು ಬಿದ್ದು ಅರ್ಚಕ ಸಾವನಪ್ಪಿದ್ದಾರೆ. ಪ್ರತಿ ವರ್ಷ ನಂಜನಗೂಡಿನಲ್ಲಿ ಅಂಧಕಾಸುರ ವಧೆ ನಡೆಯುತ್ತದೆ. ಈ ವೇಳೆ ಅರ್ಚಕ ಉಪಾಧ್ಯಾಯ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ.
ನಿನ್ನೆ ರಾತ್ರಿ ದೇವಾಲಯದ ಮುಂದೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ನೆಲದ ಮೇಲೆ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಅಂಧಕಾಸುರನ ಭಾವಚಿತ್ರದ ಮೇಲೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನು ಹೊತ್ತ ಅರ್ಚಕರ ತಂಡ ಎಂದಿನ ಆಚರಣೆಯಂತೆ ಹೊತ್ತು ತಂದರು.
ಮಂತ್ರಘೋಷಗಳು ಮುಗಿಲು ಮುಟ್ಟಿತ್ತು. ಭಾವಚಿತ್ರದ ಮೇಲೆ ಪಲ್ಲಕ್ಕಿ ಬರುತ್ತಿದ್ದಂತೆ ಸ್ವಲ್ಪ ದೂರದಲ್ಲಿ ನಿಂತಿದ್ದ ಶಂಕರ ಉಪಾಧ್ಯಾಯ ಅವರು ಪಲ್ಲಕ್ಕಿಯನ್ನು ತಮ್ಮ ಭುಜದ ಮೇಲೆ ಹೊರಲು ಮುಂದೆ ಬಂದು ಭುಜ ಕೊಟ್ಟ ಕೆಲವೇ ಸೆಕೆಂಡ್ಗಳಲ್ಲಿ ಕುಸಿದು ಬಿದ್ದರು. ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ಅವರ ನೆರವಿಗೆ ಧಾವಿಸಿದರು. ಕೂಡಲೇ ಶುಶ್ರೂಷೆ ನೀಡಿ ಸ್ಥಳೀಯರು ನಂಜನಗೂಡು ಪಟ್ಟಣ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿನ ವೈದ್ಯರು ಅರ್ಚಕ ಉಪಾಧ್ಯಾಯ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.








