ದಕ್ಷಿಣಕನ್ನಡ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣಗಳ ಸಂಖ್ಯೆ ಮುಂದುವರೆದಿದ್ದು, ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಳು ರಂಗಭೂಮಿ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಅವರಿಗೆ 68 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ. ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಸಂತಾಪಗಳು ವ್ಯಕ್ತವಾಗುತ್ತಿವೆ. ರಂಗಭೂಮಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಲಾಸೇವೆಯನ್ನು ಸಲ್ಲಿಸಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದರು.
ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಗರಡಿಯಲ್ಲಿ ಪಳಗಿದ ರಮೇಶ್ ಕಲ್ಲಡ್ಕ ಅವರು ಕಲಾಸಂಗಮದ ಎಲ್ಲ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 2 ದಿನಗಳ ಹಿಂದೆಯಷ್ಟೇ ನಾಟಕವೊಂದರಲ್ಲಿ ಅಭಿನಯಿಸಿ ಮನೆಗೆ ಮರಳಿದ್ದ ರಮೇಶ್ ಕಲ್ಲಡ್ಕ ಅವರೀಗ ಇಲ್ಲ ಎಂಬುದನ್ನು ಅರಿತ ಅಭಿಮಾನಿಗಳು, ತುಳುರಂಗಭೂಮಿ ಆಘಾತಗೊಂಡಿದೆ.