ಹಾಸನ : ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಹಾಸನದಲ್ಲಿ ಕಳೆದ 45 ದಿನಗಳಲ್ಲಿ 35ಕ್ಕೂ ಹೆಚ್ಚು ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಇಂದು ಚಲಿಸುತ್ತಿದ್ದ ಕಾರಿನಲ್ಲಿಯೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಒಬ್ಬರು ಬಲಿಯಾಗಿದ್ದಾರೆ.
ಹೌದು ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸರಣಿ ಸಾವುಗಳು ಮುಂದುವರೆದಿದ್ದು, ಚಲಿಸುತ್ತಿದ್ದ ಕಾರಿನಲ್ಲಿ ಹಾರ್ಟ್ ಅಟ್ಯಾಕ್ ಗೆ ರಂಗನಾಥ್ (57) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಹಾಸನದ ಜಿಲ್ಲಾಧಿಕಾರಿ ಕಚೇರಿಯ ಬಳಿ ಈ ಒಂದು ಘಟನೆ ನಡೆದಿದೆ. ರಂಗನಾಥ್ ಮಂಗಳೂರಿಗೆ ಟ್ರಿಪ್ ಗೆ ತೆರಳಿದ್ದರು. ಟ್ರಿಪ್ ಮುಗಿಸಿಕೊಂಡು ಕುಟುಂಬಸ್ಥರ ಸಮೇತ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು.
ಈ ವೇಳೆ ರಂಗನಾಥ್ ಅವರ ಪುತ್ರಿ ಕಾರು ಚಲಾಯಿಸುತ್ತಿದ್ದರು. ಹಾಸನ ಡಿಸಿ ಕಚೇರಿ ಸಮೀಪ ಬರುತ್ತಿದ್ದಂತೆ ರಂಗನಾಥ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ರಂಗನಾಥ ಸಾವನ್ನಪ್ಪಿದ್ದಾರೆ. ಹೃದಯಘಾತದಿಂದ ರಂಗನಾಥ್ ಸಾವನ್ನಪ್ಪಿರುವುದು ಹಿಮ್ಸ್ ವೈದ್ಯರು ದೃಢಪಡಿಸಿದರು. ರಂಗನಾಥ್ ಬೆಂಗಳೂರಿನ ಜಯನಗರ ನಿವಾಸಿ ಎಂದು ತಿಳಿದುಬಂದಿದೆ.
ಕುಸಿದು ಬಿದ್ದು ವ್ಯಕ್ತಿ ಸಾವು
ಇನ್ನು ಚಾಮರಾಜನಗರದಲ್ಲೂ ಕೂಡ ಹೃದಯಘಾತಕ್ಕೆ ವ್ಯಕ್ತಿ ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಾಮರಾಜನಗರದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಹೃದಯಘಾತದಿಂದ ಶಿವಕುಮಾರ್ (52) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ರಾಮ ಸಮುದ್ರ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿಯಾಗಿರುವ ಶಿವಕುಮಾರ್ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಇಸಿಜಿ ಮಾಡುವಷ್ಟರಲ್ಲಿಯೇ ಶಿವಕುಮಾರ್ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.