ಹಾಸನ : ಇತ್ತೀಚಿಗೆ ಈ ಒಂದು ರೀಲ್ಸ್ ಎನ್ನುವ ಹುಚ್ಚಾಟಕ್ಕೆ ಅನೇಕ ಯುವ ಜನರು ಬಲಿಯಾಗುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದ್ದು, ರೀಲ್ಸ್ ಮಾಡಲು ಹೋಗಿ ಬೆಟ್ಟದಿಂದ ಪ್ರಪಾತಕ್ಕೆ ಬಿದ್ದು ಯುವಕನೊಬ್ಬ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ.
ಹೌದು ರೀಲ್ಸ್ ಮಾಡಲು ಬೆಟ್ಟದ ತುದಿಯಲ್ಲಿ ನಿಂತ ಯುವಕ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಗಾಯಗೊಂಡ ಘಟನೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ. ರಾಕಿದ್ (18) ನೂರು ಅಡಿಗೂ ಹೆಚ್ಚು ಆಳದ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ ಎಂದು ತಿಳಿದುಬಂದಿದೆ.ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸಕಲೇಶಪುರದ ಗವಿಬೆಟ್ಟಕ್ಕೆ ಬಂದಿದ್ದ ರಾಕಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದ.
ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಕಿದ್ ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಅಸ್ಪತ್ರೆಗೆ ಕರೆದೊಯ್ಯಲಾಯಿತು.ಯಸಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.