ತುಮಕೂರು : ಕಳೆದ ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಮಕ್ಕಳ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಈಗ ಈ ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು, ಸಾಲ ತೀರಿಸಲಾಗದೇ ಸ್ವಂತ ಅಕ್ಕನ ಮಗಳನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.
ಹೌದು ಸ್ವಂತ ಚಿಕ್ಕಮ್ಮಳೆ ಸಾಲ ತೀರಿಸಲಾಗದೇ ಮಾರಾಟ ಮಾಡಿದ್ದು, ತನ್ನ ತಾಯಿಯ ಸ್ವಪ್ರಜ್ಞೆಯಿಂದ 11 ವರ್ಷದ ಬಾಲಕಿ ವಾಪಸ್ ಮನೆಗೆ ಹಿಂತಿರುಗಿದ್ದಾಳೆ. ತುಮಕೂರಿನ ದಿಬ್ಬೂರು ನಿವಾಸಿಯಾದ ಚೌಡಮ್ಮ ತನ್ನ ಮಗಳನ್ನ ಮತ್ತೆ ವಾಪಾಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಚೌಡಮ್ಮ, ತನ್ನ ಮಗಳನ್ನ ಆಂಧ್ರ ಪ್ರದೇಶದ ಹಿಂದೂಪುರಕ್ಕೆ ತಂಗಿ ಸುಜಾತಳ ಮನೆಗೆ ಬಾಣಂತನಕ್ಕೆಂದು ಕಳಿಸಿದ್ದಳು. ಬಾಣಂತನ ಮುಗಿಸಿ ವಾಪಸ್ ಮಗಳು ಬರಲಿಲ್ಲ. ಹೀಗಾಗಿ ಚೌಡಮ್ಮ ಹಿಂದೂಪುರಕ್ಕೆ ಹೋದಾಗ ತನ್ನ ಮಗಳು ಇಲ್ಲದೆ ಇರುವುದು ತಿಳಿದಿದೆ. ಚೌಡಮ್ಮ, ಮಗಳ ಇಲ್ಲದನ್ನ ಕಂಡು ಗಾಬರಿಯಾಗಿದ್ದಾಳೆ. ಈ ವೇಳೆ ಸುಜಾತ ‘ನಾನು ಸಾಲ ಮಾಡಿಕೊಂಡಿದ್ದೆ ಸಾಲ ತೀರಿಸಲಾಗದೇ 35 ಸಾವಿರಕ್ಕೆ ಮಗಳನ್ನ ಜೀತಕ್ಕಾಗಿ ಮಾರಾಟ ಮಾಡಿರುವುದಾಗಿ ಹೇಳಿದ್ದಾಳೆ.
ಹಿಂದೂಪುರದ ಶ್ರೀರಾಮುಲು ಎಂಬ ವ್ಯಕ್ತಿ ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿಕೊಂಡಿದ್ದನಂತೆ. ವಿಚಾರ ತಿಳಿದು ನನ್ನ ಮಗಳನ್ನು ವಾಪಸ್ ಕಳುಹಿಸಿ ಕೊಡುವ ಎಂದು ಬೇಡಿಕೊಂಡಾಗ ಹಣ ನೀಡಿ ಕರೆದುಕೊಂಡು ಹೋಗು ಎಂದು ಶ್ರೀರಾಮಲು ಎಂಬ ವ್ಯಕ್ತಿ ತಿಳಿಸಿದಂತೆ.
ನಂತರ ಚೌಡಮ್ಮ ತುಮಕೂರಿಗೆ ಬಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಜಿಲ್ಲಾ ಎಸ್ಪಿ ಅಶೋಕ್ರವರಿಗೆ ಮಾಹಿತಿ ನೀಡಿ ಬಾಲಕಿಯನ್ನ ರಕ್ಷಿಸಿ ಕರೆತಂದಿದ್ದಾರೆ.ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.