ಉತ್ತರಪ್ರದೇಶ : ಇತ್ತೀಚಿಗೆ ಕೌಟುಂಬಿಕ ಕಲಹಗಳಿಂದ ಕೊಲೆಗಳು ಹಾಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಇದೀಗ ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಹಿಳೆ ಒಬ್ಬಳು ತನ್ನದೇ ಕುಟುಂಬದ 8 ಜನ ಸದಸ್ಯರನ್ನು ಕೊಲ್ಲಲು ಗೋಧಿ ಹಿಟ್ಟಿನಲ್ಲಿ ವಿಷ ಬೆರೆಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಗೋಧಿ ಹಿಟ್ಟಿಗೆ ವಿಷ ಹಾಕಿರುವ ಘಟನೆ ನಡೆದಿದೆ. ಮಹಿಳೆ ಎಲ್ಲರನ್ನೂ ಕೊಲ್ಲುವ ಉದ್ದೇಶದಿಂದ ತಂದೆ ಜತೆಗೆ ಸೇರಿ ಈ ಕೃತ್ಯವೆಸಗಿದ್ದಳು. ಗೋಧಿ ಹಿಟ್ಟಿಗೆ ಸಲ್ಫೋಸ್ ಬೆರೆಸಿದ್ದಳು. ಈ ಸಂಚು ಸಕಾಲದಲ್ಲಿ ಬಯಲಾಗಿದ್ದು, ಎಲ್ಲರ ಜೀವ ಉಳಿದಿವೆ, ಮಹಿಳೆ ಮತ್ತೆ ಆಕೆಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲಕಿಯಾ ಬಾಜಾ ಖುರ್ರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬ್ರಿಜೇಶ್ ಕುಮಾರ್ ಅವರ ಪತ್ನಿ ಮಾಲತಿದೇವಿ ನಿರಂತರ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದಾಗಿ ತನ್ನ ತಂದೆ ಜತೆ ಸೇರಿ ಯೋಜನೆ ರೂಪಿಸಿದ್ದಳು. ಮಾಲತಿ ತನ್ನ ಅತ್ತಿಗೆ ಮಂಜು ದೇವಿ ಜತೆಗೆ ದೀರ್ಘಕಾಲದಿಂದ ನಡೆಯುತ್ತಿದ್ದ ಜಗಳದಿಂದ ಅಸಮಾಧಾನಗೊಂಡು ಇಡೀ ಕುಟುಂಬವನ್ನೇ ನಿರ್ಮೂಲನೆ ಮಾಡಲು ಮುಂದಾಗಿದ್ದಳು. ಮಂಜು ದೇವಿ ಆಹಾರ ಸಿದ್ಧಪಡಿಸಲು ಹೋದಾಗ ಗೋಧಿ ಹಿಟ್ಟಿನಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದಾಗ ಮಾಲತಿಯಯ ಉದ್ದೇಶ ಏನಿರಬಹುದು ಎಂಬುದು ತಿಳಿಯಿತು.
ಕೂಡಲೇ ಕುಟುಂಬದ ಎಲ್ಲಾ ಸದಸ್ಯರಿಗೂ ಮಾಹಿತಿ ನೀಡಲಾಗಿತ್ತು. ವಿಚಾರಣೆ ಸಮಯದಲ್ಲಿ ಆಕೆ ಸಲ್ಫೋಸ್ ಮಿಶ್ರಣ ಮಾಡಿರುವುದು ಹೌದೆಂದು ಒಪ್ಪಿಕೊಂಡಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಮಾಲತಿ ದೇವಿ ಮತ್ತು ಆಕೆಯ ತಂದೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.