ಹಾವೇರಿ : ಸೀರೆಯಲ್ಲಿ ಜೋಕಾಲಿ ಆಡುಲು ಹೋದ ಬಾಲಕನೊಬ್ಬ ದುರಂತ ಅಂತ್ಯ ಕಂಡ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ.
ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು ಗ್ರಾಮದ ಮನೆಯೊಂದರಲ್ಲಿ ಜೋಕಾಲಿಯಲ್ಲಿ ಆಟವಾಡುತ್ತಿದ್ದ ರಾಹುಲ್ ಮಲ್ಲಿಕಾರ್ಜುನ ಬಾವಿಹಳ್ಳಿ (16) ಎಂಬ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದ ರಾಹುಲ್, ಕೂನಬೇವು ಗ್ರಾಮದಲ್ಲಿರುವ ಅಜ್ಜ ರಾಮಣ್ಣ ತಂಡೂರ ಅವರ ಮನೆಗೆ ಬಂದಿದ್ದ, ಅಜ್ಜ ರಾಮಣ್ಣ ಅವರ ಮನೆಯ ಮೇಲಿನ ಮಹಡಿಯಲ್ಲಿ ಸೀರೆಯಿಂದ ಜೋಕಾಲಿ ಕಟ್ಟಲಾಗಿತ್ತು. ಅದರಲ್ಲಿ ಕುಳಿತು ರಾಹುಲ್ ಆಟವಾಡುತ್ತಿದ್ದ ವೇಳೆ ಜೋಕಾಲಿಯ ಸೀರೆ, ರಾಹುಲ್ನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಬಾಲಕನಿಗೆ ಉಸಿರುಗಟ್ಟಿತ್ತು. ಪ್ರಜ್ಞೆ ತಪ್ಪಿದ್ದ ಆತನನ್ನು ಪೋಷಕರು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ರಾಣೆಬೆನ್ನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.