ಬೆಳಗಾವಿ : ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಹೊರತು ಕೆಟ್ಟ ತಂದೆ ತಾಯಿ ಇರಲ್ಲ ಅಂತ ಹಿಂದೆ ಹಿರಿಯರು ಹೇಳಿರುವ ಮಾತಿದೆ. ಆದರೆ ಆ ಒಂದು ಮಾತಿಗೆ ವಿರುದ್ಧವಾಗಿ ಈಗ ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಹೆಣ್ಣು ಮಗು ಹುಟ್ಟಿದೆ ಅಂತ 15 ದಿನದ ಹಸುಗೂಸನ್ನೆ, ಭೀಕರವಾಗಿ ಕೊಲೆ ಮಾಡಿದ ಪಾಪಿ ತಂದೆಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಬೆಳಗಾವಿ ತಾಲ್ಲೂಕಿನ ಉಕ್ಕಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹದಿನೈದು ದಿನದ ನವಜಾತ ಶಿಶು ಪ್ರಿಯಾಂಕಾ(15 ದಿನ) ಕೊಲೆಯಾದ ದುರ್ದೈವಿ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಭೀಮರಾಯ ಚಿಪ್ಪಾಡಿ ಕೊಲೆ ಮಾಡಿರುವ ಪಾಪಿ ತಂದೆ. ಸ್ವಂತ ತಂದೆಯಿಂದಲೇ ಮಗುವಿನ ಹತ್ಯೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ನನ್ನ ಗಂಡನೇ ಮಗುವಿಗೆ ವಿಷ ನೀಡಿ ಕೊಲೆ ಮಾಡಿದ್ದಾರೆ ಎಂದು ಹೆಂಡತಿ ಶೀಲಾ ಚಿಪ್ಪಾಡಿ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಭೀಮರಾಯನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.








