ಬೆಂಗಳೂರು : ಫ್ಲೈಓವರ್ ಮೇಲೆ ಮಲಗಿದ್ದ ವ್ಯಕ್ತಿ ಮೇಲೆ ಮಾನಸಿಕ ಅಸ್ವಸ್ಥೆಯೊಬ್ಬಳು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆಯಲ್ಲಿ ನಡೆದಿದೆ.
ದೊಡ್ಡಬಳ್ಲಾಪುರ ತಾಲೂಕಿನ ದೊಡ್ಡ ಹೆಜ್ಜಾಜಿ ಗ್ರಾಮದ ನರಸಿಂಹಮೂರ್ತಿ ಎಂಬ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥೆ ಉಮಾದೇವಿ ಕೊಲೆ ಮಾಡಿದ್ದು, ಪೊಲೀಸರು ಮಾನಸಿಕ ಅಸ್ವಸ್ಥೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನರಸಿಂಹಮೂರ್ತಿ ಹಲವು ವರ್ಷಗಳಿಂದ ದಾಬಸ್ ಪೇಟೆಯಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ರು. ಶನಿವಾರ ಉದ್ದಾನೇಶ್ವರ ದೇಗುಲದ ಪಕ್ಕದ ಫ್ಲೈಓವರ್ ಬಳಿ ಮಲಗಿದ್ದ ವೇಳೆ ಅತನ ಮೇಲೆ ರಾಮನಗರ ಜಿಲ್ಲೆಯ ಕುದೂರು ಮೂಲದ ಉಮಾದೇವಿ ಎಂಬಾಕಿ ಏಕಾಏಕಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ನರಸಿಂಹಮೂರ್ತಿಯನ್ನು ಸ್ಥಳೀಯರು ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.