ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಹಸಿಲ್‌ನ ಗ್ರಾಮವೊಂದರಲ್ಲಿ 65 ವರ್ಷದ ವೃದ್ಧನೊಬ್ಬ ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ವೃದ್ಧನು ಮಗುವಿಗೆ ಆಹಾರ ನೀಡುವ ಆಸೆ ತೋರಿಸಿ ಪುಸಲಾಯಿಸಿ ದನದ ಕೊಟ್ಟಿಗೆಯ ಪಕ್ಕದ ಶೆಡ್‌ಗೆ ಕರೆದೊಯ್ದಿದ್ದನು. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆ ಮಾಡಿದ್ದಾನೆ.
ಮಗು ನಾಪತ್ತೆಯಾದಾಗ ಗಾಬರಿಗೊಂಡ ಸಂಬಂಧಿಕರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಖಾಸಗಿ ನಿವಾಸವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯು ಮಗುವನ್ನು ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ.
ಈ ಘೋರ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರ ಆಕ್ರೋಶ ಕಟ್ಟೆಯೊಡೆದಿದೆ. ನೂರಾರು ಜನರು ಪೊಲೀಸ್ ಚೌಕಿಗೆ ಮುತ್ತಿಗೆ ಹಾಕಿ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಷ್ಟೇ ಅಲ್ಲದೆ, ಮುಂಬೈ-ಬೆಂಗಳೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಅವರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈ ಪ್ರಕರಣದಲ್ಲಿ 15 ದಿನಗಳ ಒಳಗಾಗಿ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆ ಮಾಡಲಾಗುವುದು ಮತ್ತು ಫಾಸ್ಟ್ ಟ್ರ್ಯಾಕ್ (ತ್ವರಿತಗತಿ) ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.








