ಥಾಣೆ : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ 12-13 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿ ಆಕೆಯ ಶವವನ್ನು ಎಸೆದಿರುವ ಘಟನೆ ನಡೆದಿದೆ.
ಮುಂಬೈ ಪಕ್ಕದ ಥಾಣೆಯ ಕಲ್ಯಾಣ್‌ನಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮಾಡಿ ಬಳಿಕ ಹತ್ಯೆ ಮಾಡಲಾಗಿದ್ದು, ಬುಧವಾರ (ಡಿಸೆಂಬರ್ 25) ದಿನವಿಡೀ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸ್ಥಳೀಯರು ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದ್ದಾರೆ.
ಸೋಮವಾರ (ಡಿಸೆಂಬರ್ 23) ಮಧ್ಯಾಹ್ನ 12.00 ರ ಸುಮಾರಿಗೆ, 13 ವರ್ಷದ ಬಾಲಕಿ ಕಲ್ಯಾಣ್ ಕೊಲ್ಸೆವಾಡಿ ಪ್ರದೇಶದಲ್ಲಿನ ತನ್ನ ಮನೆಯಿಂದ ಅಂಗಡಿಗೆ ಹೋಗಿದ್ದಳು. ಎಷ್ಟೋ ಹೊತ್ತಾದರೂ ಮನೆಗೆ ಬಾರದೆ ಇದ್ದಾಗ ಮನೆಯವರು ಆತಂಕಗೊಂಡರು. ಬಳಿಕ ಬಾಲಕಿಗಾಗಿ ಹುಡುಕಾಟ ನಡೆಸಲಾಗಿತ್ತಾದರೂ ಪತ್ತೆಯಾಗಿರಲಿಲ್ಲ. ಪೊಲೀಸರಿಂದ ಸಹಾಯ ಕೇಳಿದ ನಂತರ ತನಿಖೆ ಪ್ರಾರಂಭವಾಯಿತು. ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಇದಾದ ನಂತರ ಮಂಗಳವಾರ ಬೆಳಗ್ಗೆ ಕಲ್ಯಾಣ್‌ನ ಭಿವಂಡಿ ಬಾಪಗಾಂವ್ ಬಳಿಯ ಸ್ಮಶಾನದ ಬಳಿ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಆರಂಭದಲ್ಲಿ ಬೆಳಕಿಗೆ ಬಂದಿತ್ತು.
ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಮಂಗಳವಾರವೇ ಪ್ರಮುಖ ಆರೋಪಿ ವಿಶಾಲ್ ಗಾವ್ಲಿಯನ್ನೂ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಲಾಗಿತ್ತು. ವರದಿಯ ಪ್ರಕಾರ, ಪೊಲೀಸರು ಆರೋಪಿ ವಿಶಾಲ್ ಗಾವ್ಲಿಯನ್ನು ವಿಚಾರಣೆಗೆ ಒಳಪಡಿಸಿದರು, ಅದರಲ್ಲಿ ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸಂಜೆ 5.30ರ ಸುಮಾರಿಗೆ ಬಾಲಕಿಯನ್ನು ಮನೆಗೆ ಕರೆತಂದಿದ್ದಾಗಿ ತಿಳಿಸಿದ್ದಾನೆ. ಆಗ ಹೆಂಡತಿ ಮನೆಯಲ್ಲಿ ಇರಲಿಲ್ಲ. ಇಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾನೆ. ಹೆಂಡತಿ ಮನೆಗೆ ಬಂದಾಗ ಇದನ್ನೆಲ್ಲ ಹೇಳಿದ. ಮೊದಲಿಗೆ ಆಕೆಯೂ ದಿಗ್ಭ್ರಮೆಗೊಂಡರೂ ನಂತರ ಪತಿಯನ್ನು ರಕ್ಷಿಸಲು ಬಾಲಕಿಯ ಶವವನ್ನು ವಿಲೇವಾರಿ ಮಾಡಲು ಯೋಜನೆ ರೂಪಿಸಿದ್ದಾಳೆ. ಇದಾದ ನಂತರ ಆರೋಪಿ ವಿಶಾಲ್ ಮತ್ತು ಸಾಕ್ಷಿ ರಾತ್ರಿ 8.00-8.30 ಗಂಟೆಗೆ ಸ್ನೇಹಿತನ ಆಟೋ ರಿಕ್ಷಾಕ್ಕೆ ಕರೆ ಮಾಡಿ ಶವವನ್ನು ಅದರಲ್ಲಿಟ್ಟುಕೊಂಡು ಹೊರ ತೆಗೆದಿದ್ದಾರೆ. ಸ್ಮಶಾನದ ಬಳಿ ಬಂದು ಹುಡುಗಿಯ ಶವವನ್ನು ಎಸೆದರು, ನಂತರ ಮನೆಗೆ ಹೋಗಿ ಎಲ್ಲಾ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.