ವಿಜಯಪುರ : ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಕಡೆಗೂ ನನ್ನ ಮಗ ಉಳಿಯಲಿಲ್ಲ… ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು… ನನಗೆ ಬಹಳ ನೋವಾಗಿದೆ ಈ ರೀತಿ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರು ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಘಟನೆ ನಡೆದಿದೆ.
ಹೌದು ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾಟ್ಸಪ್ ಗ್ರೂಪ್‌ನಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಎ.ಎಸ್ ಬಂಡುಗೊಳ ಈ ಒಂದು ಮನಕಲಕುವ ಸಂದೇಶವನ್ನು ಕಳುಹಿಸಿದ್ದಾರೆ.ಕಾನ್ಸಸ್ಟೇಬಲ್ ಎಎಸ್ ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಮಗು ನಿಧನ ಬೆನ್ನಲ್ಲೇ ಪೊಲೀಸ್ ಅಧಿಕಾರಿ ಬಂಡುಗೊಳ ಅವರು ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿರುವ ಗ್ರೂಪ್ಗೆ ಮೆಸೇಜ್ ಹಾಕಿದ್ದಾರೆ. ಅದರಲ್ಲಿ ನನಗೆ ರಜೆ ಸಿಗಲಿಲ್ಲ. ಅದರಿಂದ ಮಗನಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಲಾಗಿದೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, AS ಬಂಡುಗೋಳ ಯಾವುದೇ ರಜೆ ಕೇಳಿಲ್ಲ. ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿ ಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ ರಜೆ ಕೇಳಿಲ್ಲ. ನಿನ್ನೆ ಹಾಗೂ ಇಂದು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಹೇಳಿದ್ದಾರೆ.