ನವದೆಹಲಿ : ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ ಪ್ರಚಾರ ಪ್ರಕರಣದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಶಿಖರ್ ಧವನ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಬೆಟ್ಟಿಂಗ್‌ನಿಂದ ಬಂದ ಆದಾಯವನ್ನು ಅಪರಾಧದ ಆದಾಯ ಎಂದು ಪರಿಗಣಿಸಿ ಇಡಿ ಈ ಕ್ರಮ ಕೈಗೊಂಡಿದೆ.
ಹೌದು ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ 1xBet ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಶಿಖರ್ ಧವನ್, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಮುಂದಾಗಿದೆ ಎಂದು ವರದಿಯಾಗಿದೆ.
ಇಡಿ ತನಿಖೆಯ ಪ್ರಕಾರ, ಟೀಂ ಇಂಡಿಯಾದ ಕೆಲವು ಆಟಗಾರರು ಮತ್ತು ಸೆಲೆಬ್ರೆಟಿಗಳು ಈ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ. ಈ ಆದಾಯದಿಂದ ಹಲವು ಆಸ್ತಿಗಳನ್ನು ಖರೀದಿಸಲಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಸ್ತಿಗಳನ್ನು ಖರೀದಿಸಲಾಗಿದೆ ಎಂಬುದು ಇಡಿ ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ ಈ ಎಲ್ಲಾ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳಲಿದೆ.
ಕಳೆದ ಕೆಲವು ತಿಂಗಳುಗಳಿಂದ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆ ಪ್ರಕಾರ ಭಾರತದ ಸ್ಟಾರ್ ಕ್ರಿಕೆಟಿಗರು ಹಾಗೂ ಬಾಲಿವುಡ್ ಸೆಲೆಬ್ರೆಟಿಗಳನ್ನು ಈಗಾಗಲೇ ತನಿಖೆಗೆ ಒಳಪಡಿಸಲಾಗಿದೆ. ವಾಸ್ತವವಾಗಿ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳ ಪ್ರಚಾರದಿಂದ ಬಂದ ಆದಾಯದಿಂದ ಯಾವ್ಯಾವ ಆಸ್ತಿಗಳನ್ನು ಖರೀದಿಸಿದ್ದಾರೋ ಆ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ.