ಬೆಂಗಳೂರು: ರಾಜ್ಯದ ಖ್ಯಾತ ಸುದ್ದಿವಾಹಿನಿ R ಕನ್ನಡ ವಾಹಿನಿಯ ಸಂಪಾದಕಿಯ ಸ್ಥಾನಕ್ಕೆ ಶೋಭಾ ಮಳವಳ್ಳಿ ಅವರು ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಸಂಪಾದಕರಾಗಿ ಹುದ್ದೆಗೇರಿದಂತ ಕೆಲವೇ ತಿಂಗಳಿನಲ್ಲಿ ಆ ಹುದ್ದೆಯಿಂದ ಹೊರ ನಡೆದಿದ್ದಾರೆ.
ಈ ಕುರಿತಂತೆ ಪತ್ರಕರ್ತೆ ಶೋಭಾ ಮಳವಳ್ಳಿ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದು, R ಕನ್ನಡ ವಾಹಿನಿಯ ಸಂಪಾದಕಿಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. 26 ವರ್ಷಗಳ ಕಾಲ ವರದಿಗಾರಿಕೆಯಿಂದ ಸಂಪಾದಕಿಯಾಗುವವರೆಗೆ ನಡೆದ ದಾರಿ ಧೀರ್ಘವಿದೆ ಮತ್ತು ಪ್ರಾಮಾಣಿಕವಾಗಿದೆ ಎಂದಿದ್ದಾರೆ.
ಇಷ್ಟುವರ್ಷಗಳ ಕಾಲ ಸುದ್ದಿಮನೆಯಲ್ಲಿ ಪಳಗಿದ, ದುಡಿದ, ಅನುಭವ, ಆತ್ಮ ವಿಶ್ವಾಸ ಎಲ್ಲವೂ ಇದ್ದ ಯಾರಿಗಾದರೂ EDITOR ಆಗುವ ಅವಕಾಶ ಸಂತೋಷವನ್ನೆ ಕೊಡುತ್ತದೆ. ಅದು ನಮ್ಮ ಸಾಮರ್ಥ್ಯಕ್ಕೆ ಸಿಗುವ ಸ್ವಾತಂತ್ರ್ಯ ಮತ್ತು ಸವಾಲು. ಅಂತಹ ಅವಕಾಶವನ್ನು ರಾಷ್ಟ್ರೀಯ ಮಟ್ಟದ ದಿಗ್ಗಜ ಪತ್ರಿಕೋದ್ಯಮಿ ಅರ್ನಬ್ ಗೋಸ್ವಾಮಿ ನೀಡಿದಾಗ, ಕನ್ನಡದ ಸುದ್ದಿವಾಹಿನಿ ಜಗತ್ತಿನ ಮೊದಲ ಮಹಿಳಾ ಎಡಿಟರ್ ಆಗುವ ಸಾಧ್ಯತೆ ಮತ್ತು ಸಂಭ್ರಮದ ಜೊತೆಗೇ ನಾನದನ್ನು ಸ್ವೀಕರಿಸಿದ್ದೆ. ಹೊಸಮನೆ ಕಟ್ಟುವುದು ಸುಲಭ. ಅದಾಗಲೇ ಕಟ್ಟಿದ ಮನೆಯನ್ನು ಹದಗೊಳಿಸುವುದು ದೊಡ್ಡ ಕಷ್ಟ. ದಿನಕ್ಕೊಂದು ಸವಾಲು. ಸವಾಲು ನನಗಿಷ್ಟ. 18 ವರ್ಷಗಳ ಸುವರ್ಣ ನ್ಯೂಸ್ ಅನುಭವ ಧಾರೆ ಎರೆದೆ.
R ಕನ್ನಡದಿಂದ ಸೈದ್ದಾಂತಿಕ ಕಾರಣ ಒಡ್ಡಿ ದೂರ ಇದ್ದ ಎಲ್ಲರನ್ನೂ ಸ್ಟುಡಿಯೋಗೆ ಕರೆಸಲು ಯತ್ನಿಸಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಧ್ಚನಿಗಳಿಗೂ ಸ್ಥಾನವಿರಬೇಕೆಂಬುದು ನನ್ನ ನಂಬಿಕೆಯಾಗಿತ್ತು. ಇರಲಿ. ಯಾವ ಸುದ್ದಿಗೆ ಎಷ್ಟು ಮಹತ್ವ ಕೊಡಬೇಕು. ಟಿಆರ್ ಪಿ ದೃಷ್ಟಿಯಿಂದ ಯಾವುದು ಮುಖ್ಯ ಎಂಬುದನ್ನು ಚಾನೆಲ್ ಒಳಿತಿನ ಸಲುವಾಗಿಯೇ ನಾನು ನಿರ್ಧರಿಸಿರುತ್ತೇನೆ, ನಿರ್ಧರಿಸಿದ್ದೇನೆ. ಕೇವಲ ಏಳೇ ತಿಂಗಳಲ್ಲಿ ಚಾನೆಲ್ ಮನೆಮಾತಾಗಿದೆ.
ಈಗ ಚಾನೆಲ್ ಬಿಟ್ಟು ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನನ್ನ ಹಿತೈಷಿಗಳು ಸ್ವಲ್ಪ ಸಮಯ ತೆಗೆದುಕೊಳ್ಳಬಹುದಿತ್ತು, ಎಂದೆಲ್ಲಾ ಹೇಳಿದ್ದಾರೆ. ನನ್ನ ಒಳಿತಿಗಾಗಿಯೇ ಅವರು ಆ ಸಲಹೆ ಕೊಟ್ಟಿದ್ದಾರೆ. ಅವರಿಗೆಲ್ಲ ಆಭಾರಿ. ಸ್ವಾಭಿಮಾನ, ಆತ್ಮಗೌರವದ ಮುಂದೆ ಯಾವುದೂ ಹೆಚ್ಚಲ್ಲ.
ಯಾವ ಹಿನ್ನೆಲೆ ಇಲ್ಲದೆ ನಡೆದು ಬಂದ ದಾರಿ, ನಾನು ಹೆಣ್ಣೆಂಬ ಕಾರಣದ ನನ್ನ ಮತ್ತು ಅವರ ಕಷ್ಟಗಳು, ಇವನ್ನೆಲ್ಲ ಈ ಸಮಯದಲ್ಲಿ ಮಾತಾಡುವುದಿಲ್ಲ. ಮೊದಲಿಗೆ ಸಂಪಾದಕಿಯಾಗಲು, ಸಾಲು ಸವಾಲುಗಳನ್ನು ಎದುರಿಸಲು, ನನ್ನ ಸಾಮರ್ಥ್ಯವನ್ನು ಮತ್ತೆ ನಾನೇ ಪರೀಕ್ಷಿಸಿಕೊಳ್ಳಲು ಅವಕಾಶ ಕೊಟ್ಟ ಅರ್ನಬ್ ಗೆ ನಮಸ್ಕಾರ. ಆರಂಭದಿಂದಲೂ ನನ್ನನ್ನು ತಿದ್ದಿ, ಟಿಆರ್ ಪಿ ಒತ್ತಡ ಹೇರದೇ, ಜತೆಯಾಗಿ ನಿಂತ ಅರ್ನಾಬ್ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸುಕೃತ.
ನನ್ನನ್ನು, ನನ್ನ ಸಾಮರ್ಥ್ಯವನ್ನು ಅರ್ನಾಬ್ ಗೆ ವಿವರಿಸಿ, ಚಾನೆಲ್ ಗೆ ಕರೆತಂದ ನಿರಂಜನ್ ನಾರಾಯಣಸ್ವಾಮಿ, ನನ್ನ ಹೊಸ ಯೋಚನೆಗಳ ಜಾರಿಗೆ ಬೆನ್ನಿಗೆ ನಿಂತ ಬಾಲಕೃಷ್ಣ, ನಿಖಿಲ್, ನಾಗೇಂದ್ರ, ಸದಾಶಿವ ನನ್ನ ನಿರೀಕ್ಷೆಗೆ ಮೀರಿ ನನ್ನೊಂದಿಗೆ ಕೈಜೋಡಿಸಿದ ಸ್ಮಿತಾ ರಂಗನಾಥ್, ಶ್ರೀಪಾದ್ ಪಾಟೀಲ್, ರಂಜಿತ್, ಅಶ್ವಿನಿ, ಪ್ರವೀಣ್, ಶ್ರೀಲಕ್ಷ್ಮೀ, ಪ್ರೊಡಕ್ಷನ್ ಕೆಲಸದಲ್ಲಿ ಏನೇ ಹೊಸತು ಹೇಳಿದರೂ ಮಾಡುವ ತಾಯ್ಬಾ, ಸಂತೋಷ್ ಮತ್ತು ಇಡೀ ಟೀಮ್ ಗೆ ಸದಾ ಋಣಿ. ಸಾವಿರ ಮೆಸೇಜು, ಫೋನುಗಳನ್ನು ಮಾಡಿದವರು, ಮಾತಿಲ್ಲದೆಯೂ ಜೊತೆಗೆ ನಿಂತ ಆತ್ಮೀಯರು, ಸ್ನೇಹಿತರು, ಗೆಳೆಯರು, ಸಹೋದ್ಯೋಗಿಗಳ ಪ್ರೀತಿ ಪಡೆದ ನಾನೇ ಧನ್ಯೆ ಎನಿಸಿದೆ.
ನನ್ನೊಂದಿಗೆ ದುಡಿದ ನೂರಾರು ಸಹೋದ್ಯೋಗಿಗಳು, ಅವರ ನಂಬಿಕೆ, ವಿಶ್ವಾಸ ಕಂಡು ಇನ್ನಷ್ಟು ಬಾಗಿದ್ದೇನೆ. 26 ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಏಳುಬೀಳುಗಳ ಪಟ್ಟಿಗೆ ಇದೊಂದು ಸೇರ್ಪಡೆ ಅಷ್ಟೇ. ಬದುಕು ನನಗೆ ಅಚ್ಚರಿಗಳನ್ನೇ ಕೊಟ್ಟಿದೆ. ಬಯಸದೇ ಬಂದ ಭಾಗ್ಯಗಳ ಪಟ್ಟಿ ದೊಡ್ಡದಿದೆ. ಮತ್ತೊಂದು ಬರಲಿದೆ ಎಂಬುದಾಗಿ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
BIG NEWS: ರಾಜ್ಯದಲ್ಲಿ ಮತ್ತೊಂದು ಘೋರ ದುರಂತ: ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿನಿಂದ ಬಿದ್ದು ಬಾಲಕ ಸಾವು








