ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ದೂಗೂರು ಅರಣ್ಯದಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟಿದ್ದಂತ ಜೋಡಿ ಕಾಡಾನೆಗಳನ್ನು, ಒಂದೇ ದಿನಕ್ಕೆ ಅಂಬಲಿಗೋಳ ವ್ಯಾಪ್ತಿಗೆ ಮುಟ್ಟಿಸೋದಕ್ಕೆ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ನಾಳೆಯೂ ಅಂಬಲಿಗೋಳ ವ್ಯಾಪ್ತಿಯ ಅರಣ್ಯ ಇಲಾಖೆಯಿಂದ ಶೆಟ್ಟಿಹಳ್ಳಿ ವೈಲ್ಡ್ ಲೈಫ್ ಸೆಂಚುರಿ ಕಡೆಗೆ ಓಡಿಸೋ ಕಾರ್ಯಾಚರಣೆ ಮುಂದುವರೆಯಲಿದೆ ಎಂಬುದಾಗಿ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೈಸೋಡಿಯ ರೈತ ಉಮೇಶ್ ಇಪತ್ತಕ್ಕೂ ಹೆಚ್ಚು ಭತ್ತ ತುಂಬಿದ ಚೀಲ ನಾಶ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿಗೆ ಡಿಸೆಂಬರ್.1ರಂದು ಜೋಡಿ ಕಾಡಾನೆಗಳು ಎಂಟ್ರಿಯಾಗಿದ್ದವು. ಕಾನಹಳ್ಳಿ, ಕೈಸೋಡಿ ವ್ಯಾಪ್ತಿಯ ಹಲವೆಡೆ ರೈತರ ಬೆಳೆಯನ್ನು ನಾಶ ಪಡಿಸಿದ್ದವು. ಅದರಲ್ಲೂ ಕೈಸೋಡಿ ಗ್ರಾಮದ ಉಮೇಶ್ ಎಂಬುವರಿಗೆ ಸೇರಿದಂತ ಇಪ್ಪತ್ತಕ್ಕೂ ಹೆಚ್ಚು ಭತ್ತ ತುಂಬಿದ್ದ ಚೀಲಗಳನ್ನು ಆನೆಗಳು ಸಂಪೂರ್ಣ ನಾಶ ಮಾಡಿದ್ದವು. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿ, ರೈತ ಉಮೇಶ್ ಕಂಗಾಲಾಗಿದ್ದಾರೆ.

ಇದಲ್ಲದೇ ಕೈಸೋಡಿಯ ಪುಟ್ಟಪ್ಪ ಎಂಬುವರಿಗೆ ಸೇರಿದ ಭತ್ತ, ಮಂಜಪ್ಪ ಎಂಬುವರ ಕಬ್ಬು ನಾಶಪಡಿಸಿದೆ. ಮಡಸೂರು, ಬರಗಿ, ಹೊಳೆಕೊಪ್ಪ, ದೂಗೂರು ವ್ಯಾಪ್ತಿಯಲ್ಲೂ ರೈತರ ಬಾಳೆ ತೋಟ, ಅಡಿಕೆ ಗಿಡಗಳನ್ನು ನಾಶಪಡಿಸಿದ್ದವು. ದೂಗೂರು ವ್ಯಾಪ್ತಿಯ ದೇವಿದಾಸ್ ಎಂಬುವರ ಬಾಳೆ ನಾಶಮಾಡಿದ್ದರೇ, ವಕೀಲರಾದಂತ ಪ್ರಶಾಂತ್ ಎಂಬುವರ ಅಡಿಕೆ ಗಿಡಗಳನ್ನೇ ಮುರಿದು ಹಾಕಿದ್ದವು.
ಸತತ ಕಾರ್ಯಾಚರಣೆ ಕೊಟ್ಟಿತು ಫಲ
ಈ ಹಿನ್ನಲೆಯಲ್ಲಿ ಆದಷ್ಟು ಬೇಗ ಕಾಡಾನೆಗಳನ್ನು ಬಂದ ಕಡೆಗೆ ಓಡಿಸುವಂತೆ ರೈತರಿಂದ ಅರಣ್ಯ ಇಲಾಖೆಗೆ ಒತ್ತಡ ಹೆಚ್ಚಾಗಿತ್ತು. ಈ ಕಾರಣದಿಂದ ಸಕ್ರೆಬೈಲಿನಿಂದ ನಾಲ್ಕು ಕುಮ್ಕಿ ಆನೆಗಳನ್ನು, ಬೇಲೂರಿನಿಂದ ಥರ್ಮಲ್ ಡ್ರೋನ್, ಚಿಕ್ಕಮಗಳೂರಿನಿಂದ ಆನೆ ಕಾರ್ಯಪಡೆಯ ಡಿಆರ್ ಎಫ್ ಓ ಸುನೀಲ್ ಅಂಡ್ ಟೀಂ, ಸಕ್ರೆಬೈಲು ಮಾವುತರಿಂದ ಕಾಡಾನೆ ಓಡಿಸೋ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿತ್ತು.

ದೂಗೂರು, ಬರಗಿಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದಂತ ಕಾಡಾನೆಗಳನ್ನು, ಬಂದ ಕಡೆಗೆ ಓಡಿಸುವುದೇ ಅರಣ್ಯ ಇಲಾಖೆಗೆ ಸವಾಲ್ ಆಗಿತ್ತು. ಆದರೇ ಕಳೆದ ರಾತ್ರಿ ಕಾಡಾನೆ ಸುಳಿವು ಸಿಗುತ್ತಿದ್ದಂತೆ ಕಾಡಿಗೆ ನುಗ್ಗಿ, ಅರಣ್ಯ ಇಲಾಖೆಯು ಬೆದರಿಸುವಲ್ಲಿ ಸಫಲವಾಗಿತ್ತು. ಈ ಪರಿಣಾಮ ಬೆಳಗಾಗುವ ವೇಳೆಗೆ ಉಳವಿ ಕೆರೆಯಲ್ಲೇ ಈಜಿಕೊಂಡು ಕಾನಹಳ್ಳಿ ಅರಣ್ಯದತ್ತ ತೆರಳಿದ್ದವು.
ಕಾನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿದ್ದಂತ ಕಾಡಾನೆಯನ್ನು ಪತ್ತೆಹಚ್ಚಿಕೊಂಡು ಹಿಂದೆ ಬಿದ್ದಂತ ಅರಣ್ಯ ಇಲಾಖೆಯು, ಕಣ್ಣೂರಿನ ಮೂಲಕ ಅಂಬಲಿಗೋಳ ವ್ಯಾಪ್ತಿಗೆ ಮುಟ್ಟಿಸುವಲ್ಲಿ ಇಂದು ಒಂದೇ ದಿನ ಯಶಸ್ವಿಯಾಗಿದೆ. ಈ ಬಗ್ಗೆ ಥರ್ಮಲ್ ಡ್ರೋನ್ ಕ್ಯಾಮರಾದಲ್ಲೂ ಕಾಡಾನೆಗಳು ಕ್ಷಣವೂ ವಿರಮಿಸದೇ ಬೆದರಿದಂತೆ ಓಡುತ್ತಿರುವುದು ಸೆರೆಯಾಗಿದೆ.
ನಾಳೆಯೂ ಕಾಡಾನೆ ಓಡಿಸುವ ಕಾರ್ಯಾಚರಣೆ ಮುಂದುವರಿಕೆ
ಇಂಡುವಳ್ಳಿಯಲ್ಲಿಯಿಂದ ತ್ಯಾಗರ್ತಿ ಕ್ರಾಸ್ ನಲ್ಲಿ ಥರ್ಮಲ್ ಡ್ರೋನ್ ಕ್ಯಾಮರಾಗೆ ಕಾಡಾನೆಗಳು ಸೆರೆಯಾಗಿದ್ದವು. ರಸ್ತೆ ದಾಡುತ್ತಿದ್ದದ್ದು ಥರ್ಮಲ್ ಡ್ರೋನ್ ನಲ್ಲಿ ಪತ್ತೆಯಾಗಿದೆ. ಮೊದಲು ಒಂದು, ಆ ಬಳಿಕ ಮತ್ತೊಂದು ರಸ್ತೆಯನ್ನು ದಾಟಿ ಕಣ್ಣೂರು ಮೂಲಕ ಅಂಬಳಿಗೋಳ ವಲಯದ ಹೆಸರಿಕೊಪ್ಪ, ಶಾಡಲಕೊಪ್ಪ ಬೆಳಂದೂರು ಅರಣ್ಯದ ಕಡೆಗೆ ಹೋಗುತ್ತಿವೆ ಎಂಬುದಾಗಿ ಡಿಎಫ್ಓ ಮೋಹನ್ ಕುಮಾರ್ ತಿಳಿಸಿದ್ದಾರೆ.

ಇನ್ನೂ ಉತ್ತನಹಳ್ಳಿಯಿಂದ ಮೈಲಾರಿಕೊಪ್ಪಲು ಮೂಲಕ ಅಂಬಲಿಗೋಳ ವ್ಯಾಪ್ತಿಗೆ ಕಾಡಾನೆಗಳನ್ನು ಓಡಿಸಲಾಗಿದ್ದು, ನಾಳೆ ಅಂಬಲಿಗೋಳ ವ್ಯಾಪ್ತಿಯ ಅರಣ್ಯ ಇಲಾಖೆಯಿಂದ ಕೊರಗಿ, ಅರಸಾಳು ಮೂಲಕ ಹಣಗೆರೆಗೆ, ಅಲ್ಲಿಂದ ಗೌತಮಪುರ ಮಾರ್ಗವಾಗಿ ಅಂಬಲಿಗೋಳ ಡ್ಯಾಂಗೆ ಮುಟ್ಟಿಸಲಾಗುತ್ತದೆ. ಆ ಬಳಿಕ ಶೆಟ್ಟಿಹಳ್ಳಿ ವೈಡ್ ಲೈಫ್ ಸೆಂಚುರಿಗೆ ಕಾಡಾನೆಗಳು ತೆರಳಲಿವೆ ಎನ್ನುವ ಮಾಹಿತಿಯನ್ನು ಡಿಎಫ್ಓ ನೀಡಿದ್ದಾರೆ.
ಖುದ್ದು ಕಾಡಾನೆ ಓಡಿಸೋ ಕಾರ್ಯಾಚರಣೆ ನಡೆಸಿದ ಡಿಎಫ್ಓ ಮೋಹನ್ ಕುಮಾರ್
ಡಿಸೆಂಬರ್.1ರಂದು ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಕಾಡಾನೆಗಳನ್ನು ಸತತ 13 ದಿನಗಳ ಕಾಲ ಹಿಂದೆ ಓಡಿಸೋದಕ್ಕೆ ಸಾಗರ, ಸೊರಬ ಅರಣ್ಯ ಇಲಾಖೆಯ ಇಡೀ ತಂಡವೇ ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆ ಇಳಿದಿತ್ತು. ಸಿಸಿಎಫ್ ಹನುಮಂತಪ್ಪ ಮಾರ್ಗದರ್ಶನದಲ್ಲಿ, ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಅಂತೂ ಪ್ರತಿ ದಿನವೂ ಕಾಡಾನೆ ಓಡಿಸೋ ಕಾರ್ಯಾಚರಣೆ ಮುಂದಾಳತ್ವವನ್ನು ಹೊತ್ತು ಕೆಲಸ ಮಾಡಿದ್ದನ್ನು ಕೆಎನ್ಎನ್ ನ್ಯೂಸ್ ಗೆ ಕಂಡು ಬಂದಿದೆ.

ಹಗಲು ರಾತ್ರಿ ಎನ್ನದೇ ಸಾಗರ, ಸೊರಬ ಅರಣ್ಯ ಇಲಾಖೆ ಟೀಂನಿಂದ ಕಾಡಾನೆ ಓಡಿಸೋ ಕಾರ್ಯಾಚರಣೆ
ಇನ್ನೂ ಸಾಗರ ಎಸಿಎಫ್ ರವಿ, ಆರ್ ಎಫ್ ಓ ಅಣ್ಣಪ್ಪ, ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಆರ್ ಎಫ್ ಓ ಶ್ರೀಪಾದ್ ನಾಯ್ಕ್ ಅಂತೂ ರಾತ್ರಿ 12ಕ್ಕೆ ಮನೆಗೆ ಹೋದವರೂ ಕಾಡಾನೆ ಇಲ್ಲಿ ದಾಳಿ ಮಾಡಿ ರೈತರ ಬೆಳೆ ನಾಶ ಮಾಡಿದೆ ಅಂತ ಸುದ್ದಿ ಬಂದ್ರೆ ಸಾಕು ಮುಂಜಾನೆಯೇ ಓಡಿಸೋ ಕಾರ್ಯಾಚರಣೆಗೆ ಇಳಿದಿದ್ದನ್ನೂ ಸಾರ್ವಜನಿಕರು, ರೈತರು ಶ್ಲಾಘಿಸಿದ್ದಾರೆ.
ಕಾಡಾನೆ ಓಡಿಸೋ ಕಾರ್ಯಾಚರಣೆಗೆ ಚಿಕ್ಕಮಗಳೂರಿನಿಂದ ಬಂದಿದ್ದಂತ ಆನೆ ಕಾರ್ಯಪಡೆಯ ಸುನೀಲ್ ಅಂಡ್ ಟೀಂ ಕೆಲ ದಿನ ಸಾಥ್ ಕೊಟ್ಟರೇ, 13 ದಿನಗಳು ಕಾಡಾನೆ ಓಡಿಸೋ ಕಾರ್ಯಾಚರಣೆಗೆ ಸಾಥ್ ನೀಡಿದ್ದು ಮಾತ್ರ ಉಳವಿ ವ್ಯಾಪ್ತಿಯ ಡಿಆರ್ ಎಫ್ ಓ ಯೋಗರಾಜ್, ನಿಸ್ಸಾರಾಣಿ ಡಿಆರ್ ಎಫ್ ಓ ಮುತ್ತಣ್ಣ, ಹೊಸಬಾಳೆಯ ಡಿಆರ್ ಎಫ್ ಓ ಪರಶುರಾಮ್, ನೆಲ್ಲೂರು ಶಾಖೆಯ ಡಿ ಆರ್ ಎಫ್ ಓ ಎನ್.ರಾಮಪ್ಪ, ಉಳವಿ ಗಸ್ತು ಅರಣ್ಯ ಪಾಲಕ ಪ್ರವೀಣ್, ಸುಮಿತಾ.

ಇವರಲ್ಲದೇ ಸಾಗರ ವ್ಯಾಪ್ತಿಯ ಕೆಳದಿಯ ಡಿಆರ್ ಎಫ್ ಓ ವಿಜಯ್ ಕುಮಾರ್, ತ್ಯಾಗರ್ತಿ ಡಿಆರ್ ಎಫ್ ಓ ಮಂಜಪ್ಪ, ಆವಿನಹಳ್ಳಿ ಡಿಆರ್ ಎಫ್ ಓ ಮಂಜುನಾಥ್, ಗಸ್ತು ಅರಣ್ಯ ಪಾಲಕ ಧಾನಶೇಖರ್, ಶಿವನಗೌಡ, ಉಮೇಶ್, ಹೊಳೆಬಸಪ್ಪ, ವಾಚರ್ ಯಮನೂರಪ್ಪ, ಅಂಬಲಿಗೋಳ ಗಸ್ತು ಅರಣ್ಯ ಪಾಲಕ ಚಂದ್ರು ಲಮಾಣಿ, ಸುರೇಶ್ ಕೂಡ ಜೊತೆಗೂಡಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








