ಶಿವಮೊಗ್ಗ : ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ. ಆದ್ದರಿಂದ ತಮಗೆ ಅನ್ವಯಿಸುವ ಕಾನೂನುಗಳನ್ನು ಎಲ್ಲ ಸರ್ಕಾರಿ ಅಧಿಕಾರಿ/ನೌಕರರು ತಿಳಿದುಕೊಂಡಿರಬೇಕು. ಕಠಿಣವಾದ ಕಾಯ್ದೆಯಡಿ ರಕ್ಷಣಾತ್ಮಕ ಕಾನೂನುಗಳೂ ಇದ್ದು ಅವುಗಳನ್ನು ತಿಳಿದುಕೊಳ್ಳಬೇಕೆಂದು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಘಟಕ, ಜಿಲ್ಲಾಡಳಿತ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ನ್ಯಾಯಾಂಗ ನೌಕರರು, ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ‘ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮವನ್ನು’ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಸಾರ್ವಜನಿಕರ ಹಕ್ಕುಗಳು, ಬಾಧ್ಯತೆಗಳು ಜೊತೆಗೆ ಅಧಿಕಾರಿಗಳಿಗೆ ಯಾವ ಯಾವ ರಕ್ಷಣೆ ಇದೆ ಎಂಬುದನ್ನೂ ತಿಳಿಸಲಾಗಿದೆ. ಎಲ್ಲ ಸಾಧಕ ಬಾಧಕಗಳನ್ನು ನೋಡಿಯೇ ಕಾನೂನು ರೂಪುಗೊಂಡಿರುತ್ತದೆ. ತನಗೆ ಕಾನೂನು ಗೊತ್ತಿಲ್ಲ ಎಂದು ಹೇಳಲು ಬರುವುದಿಲ್ಲ. ಗೊತ್ತಿದೆ ಎನ್ನುವ ಪೂರ್ವ ಭಾವನೆ ಇದ್ದೇ ಕಾನೂನಿನ ಅನುಷ್ಟಾನ ಆಗಿರುತ್ತದೆ. ಆದ್ದರಿಂದ ಸರ್ಕಾರಿ ಅಧಿಕಾರಿ/ನೌಕರರು ತಮಗೆ ಅನ್ವಯವಾಗುವ ಕಾಯ್ದೆ, ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಎಷ್ಟೇ ಕಠಿಣವಾದ ಕಾನೂನು ಇದ್ದರೂ ರಕ್ಷಣಾತ್ಮಕ ಕಲಂ ಗಳು ಇರುತ್ತವೆ. ಅದನ್ನು ತಿಳಿಯಬೇಕು.
ಕೇಂದ್ರ ಸರ್ಕಾರದ ಅಧಿಕಾರಿ/ನೌಕರರು, ಬ್ಯಾಂಕಿಂಗ್ ಪ್ರಾಧಿಕಾರ, ಕಡಿಮೆ ಷೇರು ಇರುವ ಕಂಪೆನಿ, ಖಾಸಗಿ ವ್ಯಕ್ತಿಗಳು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಕ್ರಮ ವಹಿಸಲು ಬರುವುದಿಲ್ಲ. ಈ ಕಾಯ್ದೆಯಡಿ ಮೂರು ಬಗೆ ದೂರು ತೆಗೆದುಕೊಳ್ಳಲಾಗುತ್ತದೆ. ದೂರುದಾರರಿಂದ ನೇರವಾಗಿ, ಸ್ವಯಂ ಪ್ರೇರಿತವಾಗಿ ಹಾಘೂ ಸರ್ಕಾರ ವಹಿಸಿಕೊಟ್ಟ ದೂರನ್ನು ಸ್ವೀಕರಿಸಿ ಕ್ರಮ ವಹಿಸಲಾಗುತ್ತದೆ.
ಲೋಕಾಯುಕ್ತ ಆರೋಪಿತರಿಗೆ ನೋಟಿಸ್ ನೀಡಿದ ನಂತರ ಅಧಿಕಾರಿ/ನೌಕರರು ಶೀಘ್ರವಾಗಿ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ತೋರುತ್ತಾರೆ. ಅದು ಮಾಡದೇ ವಿವರಣಾತ್ಮಕ ಉತ್ತರ ನೀಡಬೇಕು. ಸೆಕ್ಷನ್ 8, 9 ಓದಿಕೊಳ್ಳಬೇಕು. ಪರ್ಯಾಯ ವ್ಯವಸ್ಥೆ, ಲಿಮಿಟೇಷನ್ ಬಗ್ಗೆ ತಿಳಿದುಕೊಳ್ಳಬೇಕು.
ಆರೋಪಗಳನ್ನು ತನಿಖೆಗೆ ಒಳಪಡಿಸಿ, ವರದಿ ತಯಾರಿಸಿ, ಸರ್ಕಾರಕ್ಕೆ ಹಾಗೂ ಆರೋಪಿಗೆ ಸಲ್ಲಿಸಲಾಗುವುದು. ಪ್ರತಿ ಹಂತದಲ್ಲಿ ಆರೋಪಿಗಳಿಗೆ ಅವಕಾಶಗಳನ್ನು ನೀಡಲಾಗುತ್ತದೆ ಎಂದ ಅವರು ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12(1)(3) ಬಗ್ಗೆ ವಿವರಣೆ ನೀಡಿದರು. ಆರೋಪಿತರು ದಾಖಲೆಗಳನ್ನು, ಸತ್ಯ ವರದಿ ಸಲ್ಲಿಸುವ ಬಗ್ಗೆ ತಿಳಿಸಿದರು.
ಗಂಭೀರ ಕರ್ತವ್ಯ ಲೋಪವಾಗಿದ್ದರೆ ಸೆಕ್ಷನ್ 13 ರಡಿ ಉಗ್ರ ಶಿಕ್ಷೆಗೆ ಅವಕಾಶವಿದೆ. ಕರ್ತವ್ಯ ಲೋಪದ ಪ್ರಮಾಣದ ಆಧಾರದ ಮೇಲೆ ಶಿಕ್ಷೆ ನೀಡಲಾಗುವುದು. ಸೆಕ್ಷನ್ 17, 19 ನಿಂದನೆ ಪ್ರಕ್ರಿಯೆ ಜರುಗಿಸುವ ಬಗ್ಗೆ ತಿಳಿಸಿದ ಅವರು ಕಾಯ್ದೆಯಡಿ ರಕ್ಷಣೆಯೂ ಇದೆ. ಎಚ್ಚರಿಕೆಯೂ ಇದೆ ಎಂದರು.
ಒಂದು ವೇಳೆ ಸಾರ್ವಜನಿಕ ದೂರುದಾರರು ಮಾನಹಾನಿ ಮಾಡಿದ್ದಾರೆಂದು ಮನವರಿಕೆ ಆದ ಸಂದರ್ಭದಲ್ಲಿ ನ್ಯಾಯಾಲಯ ದಲ್ಲಿ ದಾವೆ ಹೂಡಬಹುದು ಎಂದು ತಿಳಿಸಿದ ಅವರು ಕಾಯ್ದೆಯ ಮುಖ್ಯವಾದ ಸೆಕ್ಷನ್‌ಗಳ ಬಗ್ಗೆ ತಿಳಿಸಿಕೊಟ್ಟರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಎನ್. ಹೇಮಂತ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್ ಆಗಮಿಸಲಿದ್ದು, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-14 ರ ಎನ್.ಆರ್. ಲೋಕಪ್ಪ, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-05ರ ಜಿ.ವಿ. ವಿಜಯನಂದ, ಸಿವಿಲ್ ನ್ಯಾಯಾಧೀಶರು ಮತ್ತು ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಯಾದ ಕಿರಣ್ ಪಿ.ಎಂ. ಪಾಟೀಲ್, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ ಪಾಲ್ಗೊಂಡಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಎಂ.ಎಸ್ ಸಂತೋಷ್ ಸ್ವಾಗತಿಸಿದರು.
ನಕಲಿ ಕೀಟ ನಾಶಕ ಉತ್ಪನ್ನಗಳ ಹಾವಳಿ ತಪ್ಪಿಸಲು ಕ್ರಮ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್
ಶಿವಮೊಗ್ಗದಲ್ಲಿ ಉಪ ಲೋಕಾಯುಕ್ತರಿಂದ ಸಾರ್ವಜನಿಕರಿಂದ ದೂರು ಸ್ವೀಕಾರ, ವಿಚಾರಣೆ-ವಿಲೇವಾರಿ