ಶಿವಮೊಗ್ಗ: ಇಪ್ಪತ್ತಕ್ಕೂ ಹೆಚ್ಚು ಮನೆಗಳಿವೆ. ಆದರೆ ಓಡಾಟಕ್ಕೆ ರಸ್ತೆ ಇಲ್ಲ. ಹೀಗಾಗಿ ಸಾಗರ ತಾಲ್ಲೂಕಿನ ಕೆ.ಜಿ ಕೊಪ್ಪ ಗ್ರಾಮಸ್ಥರು ತಹಶೀಲ್ದಾರರ ಕಚೇರಿ ಬಳಿಯಲ್ಲಿ ಪ್ರತಿಭಟನೆ ನಡೆಸಿ, ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ.ಜಿ ಕೊಪ್ಪ ಗ್ರಾಮದ ಸುಮಾರು 20 ಮನೆಗಳಿಗೆ ಓಡಾಡಲು ರಸ್ತೆ ಇದೆ. ಆದರೆ ಆ ರಸ್ತೆಯನ್ನು ಮಹಾದೇವಪ್ಪ, ರಾಮ ಎಂಬುವರು ಒತ್ತುವರಿ ಮಾಡಿಕೊಂಡು ರಸ್ತೆ ಬಂದ್ ಮಾಡಿದ್ದಾರೆ. ಹೀಗಾಗಿ ಈಗ ಕೆ.ಜಿ ಕೊಪ್ಪ ಗ್ರಾಮಸ್ಥರ ಓಡಾಟಕ್ಕೆ ರಸ್ತೆಯೇ ಇಲ್ಲದಂತೆ ಆಗಿದೆ.
ಈ ಹಿನ್ನೆಲೆಯಲ್ಲಿ ಸಾಗರದ ತಹಶೀಲ್ದಾರರ ಕಚೇರಿಯ ಮುಂದೆ ಕೆ.ಜಿ ಕೊಪ್ಪ ಗ್ರಾಮಸ್ಥರು, ಕೆಂಚಗೊಂಡನಕೊಪ್ಪ ಗ್ರಾಮ ಸುಧಾರಣಾ ಸಮಿತಿಯವರು ಕರ್ನಾಟಕ ರಕ್ಷಣಾ ವೇದಿಕೆಯ ಮನೋಜ್ ಕುಗ್ವೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರರಿಗೆ ರಸ್ತೆ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಯಿತು.
ಈ ವೇಳೆ ಮಾತನಾಡಿದ ಕರವೇ ಸಾಗರ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ಅವರು, ಕೆ.ಜಿ ಕೊಪ್ಪ ಗ್ರಾಮದ 20 ಮನೆಗಳಿಗೆ ಹೋಗೋದಕ್ಕೆ ರಸ್ತೆ ಇಲ್ಲ. ಇದಕ್ಕೆ ಕಾರಣ ಇಬ್ಬರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆ ಸಾಗಿಸಲು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯೋದಕ್ಕೆ ಅಡ್ಡಿ ಉಂಟಾಗಿದೆ. ಶಾಲಾ ಮಕ್ಕಳು ಶಾಲೆಗೆ ತೆರಳೋದಕ್ಕೂ ಸಾಧ್ಯ ಆಗುತ್ತಿಲ್ಲ. ಈ ಸಮಸ್ಯೆ ಪರಿಹರಿಸುವಂತೆ ತಹಶೀಲ್ದಾರರಿಗೆ ಒತ್ತಾಯಿಸಿದರು.
ಕೆಂಚಗೊಂಡನಕೊಪ್ಪ ಗ್ರಾಮ ಸುಧಾರಣಾ ಸಮಿತಿಯ ಉಪಾಧ್ಯಕ್ಷ ಜಯರಾಮ್ ಮಾತನಾಡಿ, ಕೆ.ಜಿ ಕೊಪ್ಪ ಗ್ರಾಮದಲ್ಲಿ ಹೊಸದಾಗಿ ಮನೆಯನ್ನು ನಿರ್ಮಿಸಿಕೊಂಡ ಮನೆಗಳಿಗೆ ರಸ್ತೆ ಇಲ್ಲದೆ ಸಮಸ್ಯೆ ಆಗಿದೆ. ಸಾರ್ವಜನಿಕ ಓಡಾಟಕ್ಕೆ ತೊಂದರೆ ಆಗಿದೆ. ಹೀಗಾಗಿ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ರಸ್ತೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಕೆಜಿ ಕೊಪ್ಪದ ಗ್ರಾಮಸ್ಥರಾದಂತ ರಘು ಅವರು ಈ ಹಿಂದೆಯೂ ತಹಶೀಲ್ದಾರರಿಗೆ ರಸ್ತೆ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಸಮಸ್ಯೆ ಪರಿಹಾರ ಆಗಿಲ್ಲ. ಈ ಕೂಡಲೇ ಕೆಜಿ ಕೊಪ್ಪ ಗ್ರಾಮಕ್ಕೆ ತಹಶೀಲ್ದಾರರು ಭೇಟಿ ನೀಡಿ, ರಸ್ತೆ ಒತ್ತುವರಿ ಮಾಡಿಕೊಂಡಿದ್ದನ್ನು ಬಿಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆ ವೇಳೆ ಕೆಂಚಗೊಂಡನಕೊಪ್ಪ ಗ್ರಾಮ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಬಿ.ಪದ್ಮನಾಭ, ಸದಸ್ಯರಾದ ರಾಮಪ್ಪ, ಪರಮೇಶ್ವರಪ್ಪ, ಗಣಪತಿ. ಬಿ, ಜಟ್ಯಪ್ಪ ಕಡೇಮನೆ, ವೀರಪ್ಪ ಹೊಂಬಾಳೆ, ರಾಮಪ್ಪ ಜಿಗಲಿ, ಜಯರಾಮ, ಚೌಡಪ್ಪ, ಈಶ್ವರ, ಕೆರಿಸ್ವಾಮಿ, ಶ್ರೀಧರ, ಈಶ್ವರಪ್ಪ, ಬಾಲಚಂದ್ರ ಶೆಟ್ಟಿ, ಅಣ್ಣಪ್ಪ, ಸಿದ್ದಪ್ಪ, ಪಾಂಡು ಸುಬ್ರಹ್ಮಣ್ಯ ಶೇಟ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು








