ಶಿವಮೊಗ್ಗ : ಜಿಲ್ಲೆಯ ಸಾಗರದಲ್ಲಿ ನಿನ್ನೆ ಬೀದಿ ನಾಯಿ ದಾಳಿಯಿಂದಾಗಿ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದನು. ಅಲ್ಲದೇ ಮಹಿಳೆಯ ಮೇಲೂ ದಾಳಿಯನ್ನು ನಡೆಸಲಾಗಿತ್ತು. ಇಂತಹ ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕು ಹಾಗೂ ಬೀದಿನಾಯಿ ಕಚ್ಚಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಗರಸಭೆಯಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ಇಂದು ಸಾಗರ ನಾಗರೀಕರ ಒಕ್ಕೂಟ, ಸಾಗರ ಹೆಲ್ಪ್‍ಲೈನ್, ಪೇಶೆಂಟ್ ರಿಲೀಫ್ ಫೌಂಡೇಶನ್ ಇನ್ನಿತರೆ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆ ವೇಳೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ನಗರಸಭೆಯವರು ಪ್ರತಿಭಟನೆ ಇನ್ನಿತರೆಗಳಿಗೆ 30 ಸಾವಿರಕ್ಕೂ ಹೆಚ್ಚಿನ ಹಣದ ನೆರವು ನೀಡುತ್ತಾರೆ. ಆದರೆ ಬೀದಿನಾಯಿ ಕಚ್ಚಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಯಾಪೈಸೆ ಆರ್ಥಿಕ ಸಹಕಾರ ನೀಡುತ್ತಿಲ್ಲ. ಕಾನೂನು ನಿಯಮಾವಳಿಯನ್ನು ಪಾಲಿಸಿ ಬೀದಿನಾಯಿ ನಿಯಂತ್ರಣ ಮಾಡಲು ಅವಕಾಶ ಇದೆ. ನಾಯಿಕಾಟ ತಪ್ಪಿಸಿ ಎಂದು ನಗರಸಭೆ ಎದುರು ಸಾರ್ವಜನಿಕರು ಪ್ರತಿಭಟನೆ ಮಾಡುವುದು ಆಡಳಿತಕ್ಕೆ ಕಪ್ಪುಚುಕ್ಕೆ. ತಕ್ಷಣ ಬೀದಿನಾಯಿಗಳ ಹಾವಳಿಯಿಂದ ಜನರನ್ನು ರಕ್ಷಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದಂತ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಅವರು, ಬೀದಿನಾಯಿ ಹಾವಳಿಯಿಂದ ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಾಯಿ ಮನೆಯ ಮೇಲೆ ಸಹ ಹತ್ತಿ ಉಪಟಳ ನೀಡುತ್ತಿವೆ. ಸೋಮವಾರ ಜನ್ನತ್ ನಗರದಲ್ಲಿ ರಶೀದ್ ಎಂಬುವವರ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಮಗುವನ್ನು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಂತಹ ಹಲವು ಪ್ರಕರಣಗಳು ಪಟ್ಟಣದಲ್ಲಿ ನಡೆದಿದೆ. ಬೀದಿ ನಾಯಿ ನಿಯಂತ್ರಣ ಮಾಡಿ ಎಂದರೆ ಪ್ರಾಣಿದಯಾ ಸಂಘದವರನ್ನು ತೋರಿಸಿ ಸುಮ್ಮನಾಗುತ್ತಿದ್ದಾರೆ. ನಗರಸಭೆಯಲ್ಲಿ ನಾಯಿಕಡಿತ ಇನ್ನಿತರೆ ನಡೆದಾಗ ತಿಳಿಸಲು ಸಹಾಯವಾಣಿ ಮಾಡಬೇಕು. ಆದರೆ ಅದನ್ನು ಪಾಲಿಸಿಲ್ಲ. ತಕ್ಷಣ ಸಾಗರ ನಗರದಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ತರಬೇಕು. ಬೀದಿನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದಂತ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯ ಜೊತೆಗೆ ಸಾಗರದ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು.
ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಮಾತನಾಡಿ ಇಂದು ಸರ್ಕಾರದಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೊಸ ಆದೇಶ ಬಂದಿದೆ. ಆ ಆದೇಶದಂತೆ ನಗರಸಭೆಯು ಬೀದಿ ನಾಯಿಗಳ ನಿಯಂತ್ರಣ ಕ್ರಮ ವಹಿಸಲಿದೆ. ಈಗಾಗಲೇ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಟೆಂಡರ್ ಕರೆಯಲಾಗಿದೆ. ಒಂದು ಸಮಸ್ಥೆ ಮುಂದೆ ಬಂದಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತ್ರ ನಿಯಂತ್ರಣ ಕ್ರಮವಾಗಲಿದೆ. ನಿನ್ನೆ ಬೀದಿ ನಾಯಿಗಳ ದಾಳಿಗೆ ಒಳಗಾಗಿರುವಂತ ಬಾಲಕನ ಚಿಕಿತ್ಸಾ ವೆಚ್ಚವನ್ನು ನಗರಸಭೆಯೇ ಭರಿಸಲಿದೆ. ಇದಲ್ಲದೇ ಸರ್ಕಾರದಿಂದ ಸಿಗುವಂತ ಪರಿಹಾರವನ್ನು ನೀಡುವ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದರು.
ಈ ಪ್ರತಿಭಟನೆ ವೇಳೆ ರೈತ ಸಂಘದ ದಿನೇಶ್ ಶಿರವಾಳ, ಮಂಜಪ್ಪ ಹಿರೇನೆಲ್ಲೂರು, ರಫೀಕ್ ಕೊಪ್ಪ, ಸದ್ದಾಂ ದೊಡ್ಮನೆ, ವಸೀಂ ಉಳ್ಳೂರು, ಅಜೀಂ, ಕಬೀರ್ ಚಿಪ್ಪಳಿ, ಪ್ರವೀಣ್, ಇಸ್ಮಾಯಿಲ್, ಮನ್ಸೂರ್, ಇಮ್ರಾನ್ ಇನ್ನಿತರರು ಭಾಗವಹಿಸಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: 1400 ಜನರ ಸಾವಿಗೆ ಕಾರಣವಾದ ಪ್ರಬಲ ಭೂಕಂಪದ ನಂತರ, ಅಫ್ಘಾನಿಸ್ತಾನದಲ್ಲಿ 5.5 ತೀವ್ರತೆಯಯಲ್ಲಿ ಮತ್ತೆ ಭೂಕಂಪ
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ