ಶಿವಮೊಗ್ಗ: ಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗಗಳು “ಅಂಚಿಗೆ ತಳ್ಳಲ್ಪಟ್ಟಿವೆ” ಎಂದು ಕನ್ನಡದ ಹಿರಿಯ ವಿಮರ್ಶಕ ಮತ್ತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಕಳವಳ ವ್ಯಕ್ತಪಡಿಸಿದರು.
2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಶಂಕರಘಟ್ಟದಲ್ಲಿನ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಸೋಮವಾರ ವಿಭಾಗದ ಆವರಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ತಂತ್ರಜ್ಞಾನ ಹಾಗೂ ಆರ್ಥಿಕವಾಗಿ ಲಾಭದಾಯಕ ಎಂದು ಪರಿಗಣಿಸಲಾಗುವ ಕ್ಷೇತ್ರಗಳಿಗೆ ಒಲವು ಹೆಚ್ಚಿದ ಕಾರಣ ಹಾಗೂ ಆರ್ಥಿಕತೆಗೆ ಕೊಡುಗೆ ನೀಡದ ಜ್ಞಾನಕ್ಷೇತ್ರಗಳೆಂಬ ಕಾರಣದಿಂದ ಮಾನವಿಕ ವಿಷಯಗಳು ಅಂಚಿಗೆ ತಳ್ಳಲ್ಪಡುತ್ತಿವೆ. ಹಿಂದೆ ಸಮಾಜವನ್ನು ಕಟ್ಟುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಈ ಮಾನವಿಕ ವಿಭಾಗಗಳು, ಇಂದು ತಮ್ಮ ಶಕ್ತಿಯನ್ನು ತಾವೇ ಕುಂದಿಸಿಕೊಂಡು ಮಾರ್ಜಿನಲೈಸ್ ಆಗಿವೆ” ಎಂದು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ವಿಭಾಗದ ಸಾಹಿತ್ಯ ಸಂಘಕ್ಕೆ ಚಾಲನೆ ನೀಡಲಾಯಿತು. ವಿಭಾಗದ ಅಧ್ಯಕ್ಷ ಡಾ. ದತ್ತಾತ್ರೇಯ ಮಾತನಾಡಿ, ಇಂಗ್ಲಿಷ್ ವಿಭಾಗವನ್ನು ನಿರ್ಮಿಸುವಲ್ಲಿ ಚೆನ್ನಿ ಅವರ ಕೊಡುಗೆ ಅಪಾರ. ಇತರೆ ಸಹೋದರ ವಿಶ್ವವಿದ್ಯಾಲಯಗಳಲ್ಲಿ ಕಾಣದ ಆಧುನಿಕ ಪ್ರಯೋಗಗಳನ್ನು ಇಲ್ಲಿ ಆರಂಭಿಸಲು ಅವರು ಪ್ರಮುಖ ಪಾತ್ರ ವಹಿಸಿದರು. ಅವರ ಶೈಕ್ಷಣಿಕ ಬದ್ಧತೆ ಮತ್ತು ಸಮರ್ಪಣಾ ಮನೋಭಾವ ಅನುಕರಣೀಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ರಾಮಪ್ರಸಾದ್, ಪ್ರೊ. ನಮ್ರತಾ ಮತ್ತು ಡಾ. ಆರ್.ಕೆ. ನಾಯಕ್ ಸೇರಿದಂತೆ ವಿಭಾಗದ ಇತರ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ: ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ
SHOCKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಕೃತ್ಯ: ಹೆಣ್ಣುಮಗುವೆಂದು ಹಸುಗೂಸನ್ನೇ ಕೊಂದ ಪಾಪಿ ತಾಯಿ








