ಶಿವಮೊಗ್ಗ : ಸಹಕಾರ ಸಂಸ್ಥೆ ಬೆಳೆಯಲು ಆಡಳಿತ ಮಂಡಳಿ ಹಾಗೂ ಷೇರುದಾರರ ಹೊಣೆಗಾರಿಕೆ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಷೇರುದಾರರು ಸಂಘದಲ್ಲಿ ಮಾರಾಟಕ್ಕಿಟ್ಟಿರುವ ಪರಿಕರಗಳನ್ನು ಖರೀದಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಸೊರಬದ ಶ್ರೀಮಾರಿಕಾಂಬಾ ರೈತ ಉತ್ಪಾದಕರ ಸೌಹಾರ್ದ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಎಚ್.ಎನ್.ಚಂದ್ರಪ್ಪ ಗುಂಜನೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಚಿಕ್ಕಪೇಟೆಯಲ್ಲಿ ಕಾರ್ಯನಿರ್ವಹಿಸುವ ಶ್ರೀ ಮಾರಿಕಾಂಬಾ ರೈತ ಉತ್ಪಾದಕ ಸಹಕಾರ ಸಂಘದ ಪಕ್ಕದಲ್ಲಿರುವ ಶ್ರೀಸತ್ಯನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹನಿಹನಿ ಕೂಡಿದರೆ ಹಳ್ಳ ಎನ್ನುವಂತೆ ನಾವು ಮಾಡುವ ಸಣ್ಣ ವಹಿವಾಟು ದೊಡ್ಡಮಟ್ಟದ ವ್ಯವಹಾರವಾಗಿ ಬದಲಾಗುತ್ತದೆ. ಜೊತೆಗೆ ಸಂಘದಲ್ಲಿ ಷೇರುದಾರರು ಬ್ಯಾಂಕಿನಲ್ಲಿ ಠೇವಣಿ ಇಡುವ ಬದಲು ನಮ್ಮ ಸಂಘದ ಹೂಡಿಕೆಯನ್ನು ಮಾಡಿದರೆ ಅತಿ ಅವಶ್ಯವಿರುವ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಖಾಸಗಿ ಗೊಬ್ಬರದ ಅಂಗಡಿಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಗೊಬ್ಬರ, ಕೀಟನಾಶಕಗಳನ್ನು ಮಾಡಬೇಕು. ಆದರೆ ನಮ್ಮ ಸಂಘದಲ್ಲಿ ರೈತರು ಹಾಗೂ ಷೇರುದಾರರು ಕಾಯುವ ಪ್ರಶ್ನೆಯೇ ಎದುರಾಗುವುದಿಲ್ಲ. ಅಲ್ಲದೇ ನಾವೇ ಪಾಲುದಾರರಾಗಿರುವ ಸಹಾಕರ ಸಂಘದಲ್ಲಿ ನಮ್ಮದು ಎನ್ನುವ ಹೆಮ್ಮೆಯ ಭಾವ ಮೂಡುತ್ತದೆ ಎಂದು ತಿಳಿಸಿದರು.
ಸಂಘದಲ್ಲಿ 433 ಷೇರುದಾರರನ್ನು ಹೊಂದಿದ್ದು, ಗರಿಷ್ಠ ಮಟ್ಟ ತಲುಪಲು 70 ಜನರ ಅವಶ್ಯಕತೆ ಇದೆ. ಪ್ರತಿ ಷೇರುದಾರ ಕನಿಷ್ಠ 10 ಸಾವಿರ ರೂಪಾಯಿ ವ್ಯಾಪಾರ ವಹಿವಾಟು ಮಾಡಿದರೆ ಒಟ್ಟು ಷೇರುದಾರರವರೆಗೆ ಕನಿಷ್ಠ 43 ಲಕ್ಷ ವಹಿವಾಟು ಮಾಡಬಹುದು. ಇದರಿಂದ ಸಂಘ ಸಹಜವಾಗಿ ಲಾಭದಲ್ಲಿ ಇರುತ್ತದೆ ಎಂದರು.
ಸಂಘದ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಬಿ.ವಾರ್ಷಿಕ ವರದಿ ವಾಚಿಸಿದರು. ತೋಟಗಾರಿಕಾ ಅಧಿಕಾರಿ ರಾಜು ನಾಯಕ್ ಉದ್ಘಾಟಿಸಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವರ್ಗಾವಣೆಗೊಂಡಿರುವ ತೋಟಗಾರಿಕಾ ಅಧಿಕಾರಿ ದೊರೈರಾಜ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಉಪಾಧ್ಯಕ್ಷ ಚಂದ್ರಪ್ಪ ಕಲ್ಲಂಬಿ, ನಿರ್ದೇಶಕರಾದ ರಾಮಪ್ಪ ಗುಡವಿ, ಯುವರಾಜ್ ಗುಡವಿ, ಸುಭಾಷ್ ಪಾಟೀಲ್ ಗುಂಜನೂರು, ಸೋಮಶೇಖರ್ ಓಟೂರು, ಜಗನ್ನಾಥ್ ಓಟೂರು, ಗೋಪಾಲ ಸಿಗೇಹಳ್ಳಿ, ಹುಚ್ಚಪ್ಪ ಎಂ.ಗುಂಜನೂರು,ಪಾರ್ವತಿ ಮಂಜಪ್ಪ ಗುಂಜನೂರು, ಕಲಾವತಿ ಚಂದ್ರಪ್ಪ ಗುಡವಿ,ಬಸವರಾಜ್ ಚಿಕ್ಕಾವಲಿ,ರಮೇಶ್ ಓಟೂರು, ಕಚೇರಿ ಸಹಾಯಕ ಎಸ್.ಬಿ. ನಂದನಕುಮಾರ್, ಕಾರ್ಯಕ್ರಮ ಅಧಿಕಾರಿ ಮಯರಾಡ ಸಂಸ್ಥೆ ಚಿತ್ರದುರ್ಗದ ಶಿವಕುಮಾರ್ ಐ.ಬಿ. ಇದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ