ಶಿವಮೊಗ್ಗ : ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ಸೇರಿದಂತೆ ತಡೆಗೋಡೆ ನಿರ್ಮಾಣಕ್ಕೆ ಸುಮಾರು 75 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, ಮಳೆ ಉಂಟಾಗುವ ಸಮಸ್ಯೆಯನ್ನು ತಡೆಯಲು ವಿಶೇಷವಾಗಿ ಯೋಜನೆ ರೂಪಿಸಲಾಗಿದ್ದು ಮೊದಲ ಹಂತದಲ್ಲಿ 10 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸೇತುವೆ ನಿರ್ಮಾಣ ಮಾಡಿ ಎನ್ನುವುದು ಈ ಭಾಗದ ಜನರ ಬಹುಕಾಲದ ಕನಸು. ಇಲ್ಲಿ ಬಡ ಕುಟುಂಬದವರು ವಾಸವಿದ್ದು, ಮಳೆಗಾಲದಲ್ಲಿ ನೀರು ಅವರ ಮನೆಗಳಿಗೆ ನುಗ್ಗುತ್ತಿದೆ. ಸದಾ ಆತಂಕದಲ್ಲಿಯೆ ಬದುಕುತ್ತಿರುವ ಜನರಿಗೆ ಶಾಶ್ವತ ಪರಿಹಾರ ಒದಗಿಸಲು ಯೋಜನೆ ರೂಪಿಸಿದ್ದು, ಉಪ ಮುಖ್ಯಮಂತ್ರಿಗಳು ಸೇತುವೆ ನಿರ್ಮಾಣಕ್ಕೆ 75 ಕೋಟಿ ರೂ. ಕೊಡಲು ಸಮ್ಮತಿ ಸೂಚಿಸಿದ್ದು, 10 ಕೋಟಿ ಮಂಜೂರು ಮಾಡಿದ್ದಾರೆ. ಬೆಂಗಳೂರಿನಿಂದ ತಜ್ಞರ ತಂದು ಬಂದು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿಯೆ ಕಾಮಗಾರಿ ಪ್ರಾರಂಭವಾಗಲಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗುತ್ತದೆ ಎಂದರು.
ಸಾಗರ ಪಟ್ಟಣ ಪ್ರದೇಶ ಹಾದು ಹೋಗುವ ಮಾವಿನಹೊಳೆಯಿಂದ ಸಹ ಸಾಕಷ್ಟು ಅನಾಹುತವಾಗುತ್ತಿದೆ. ಸೊರಬ ರಸ್ತೆ ಬ್ರಿಡ್ಜ್ನಿಂದ ಕೊಂಕಣಿ ಬ್ಯಾಣದವರೆಗೆ ನೀರು ಹರಿದು ಬರುತ್ತಿದ್ದು ವಿಪರೀತ ಮಳೆ ಸಂದರ್ಭದಲ್ಲಿ ಪ್ರವಾಹ ಉಂಟಾಗುತ್ತಿದೆ. ಇದನ್ನು ಮನಗಂಡು ನೀರು ಹರಿದು ಬರುವ ಪ್ರದೇಶವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು ಇದಕ್ಕಾಗಿ ನೀಲನಕ್ಷೆ ಸಿದ್ದಪಡಿಸಿದೆ. ಮಳೆಗಾಲದ ಸಂದರ್ಭದಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವ ಉದ್ದೇಶದಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ನದಿ ಹೊಳೆ ಹಳ್ಳಕೊಳ್ಳಗಳ ಪಾತ್ರವನ್ನು ಅಭಿವೃದ್ದಿ ಪಡಿಸುವ, ಅಗತ್ಯ ಇರುವ ಕಡೆ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ದಿನದ 24 ಗಂಟೆ ಶರಾವತಿ ನೀರು ಮನೆಮನೆಗೆ ತಲುಪಿಸುವ ಯೋಜನೆಗೆ ಅಂತಿಮ ಹಂತದ ಸಿದ್ದತೆ ನಡೆದಿದ್ದು, ಸರ್ಕಾರದಿಂದ ಸುಮಾರು 210 ಕೋಟಿ ರೂ. ಬಿಡುಗಡೆಯಾಗುವ ಸಾಧ್ಯತೆ ಇದೆ. ಒಳಚರಂಡಿ ಯೋಜನೆಗೆ ಹೆಚ್ಚುವರಿಯಾಗಿ 20 ಕೋಟಿ ರೂ. ಮಂಜೂರಾಗಿದೆ. ವಿಪರೀತ ಮಳೆಯಿಂದ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಅದರ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳಲಾಗಿದೆ. ಸಾಗರ ಮತ್ತು ಹೊಸನಗರ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಿಲ್ಲಿಸಲಾಗಿತ್ತು. ತಕ್ಷಣ ಕಾಮಗಾರಿ ಪ್ರಾರಂಭಿಸಲು ಗುಂಡಿ ಬಿದ್ದಿರುವ ರಸ್ತೆಗಳನ್ನು ಕೂಡ ತಕ್ಷಣವೇ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಶಾಸಕರ ವಿಶೇಷ ಕರ್ತವ್ಯ ಅಧಿಕಾರಿ ಟಿಪಿ ರಮೇಶ್, ಪ್ರಮುಖರಾದ ನಿತ್ಯಾನಂದ ಶೆಟ್ಟಿ, ಕಲಸೆ ಚಂದ್ರಪ್ಪ, ಸುರೇಶಬಾಬು, ವಿಲ್ಸನ್ ಗೋನ್ಸಾಲ್ವಿಸ್, ಅರ್ಥರ್ ಗೋಮ್ಸ್, ಕಬೀರ್ ಚಿಪ್ಳಿ, ಯಶವಂತ ಪಣಿ, ಗಿರೀಶ್ ಕೋವಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ