ಶಿವಮೊಗ್ಗ : ಸಾಗರದ ಮೆಸ್ಕಾಂ ಕಚೇರಿ ಹಿಂಭಾಗದಲ್ಲಿರುವ ಟ್ರಾನ್ಸ್ಫರ‍್ಮರ್ ರಿಪೇರಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ 4ಕ್ಕೆ ಶಾರ್ಟ್ಸರ್ಕ್ಯೂಟ್‌ನಿಂದ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಜೋಗ ರಸ್ತೆಯ ಮೆಸ್ಕಾಂ ಕಚೇರಿ ಹಿಂಭಾಗದ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಇರುವ ಟಿ.ಸಿ. ರಿಪೇರಿ ಕೇಂದ್ರದಕ್ಕ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ವ್ಯಾಪಕವಾಗಿ ಆವರಿಸಿದ ಬೆಂಕಿ ಕೆನ್ನಾಲಿಗೆಗೆ ರಿಪೇರಿಗೆ ಬಂದಿದ್ದ 15ಕ್ಕೂ ಹೆಚ್ಚು ಟಿ.ಸಿ.ಗಳು ಸುಟ್ಟು ಭಸ್ಮವಾಗಿದೆ. ಇದರ ಜೊತೆಗೆ ತಾಲ್ಲೂಕಿನ ಬೇರೆಬೇರೆ ಭಾಗಗಳಲ್ಲಿ ಅಳವಡಿಸಲು ತಂದಿದ್ದ ಐದಾರು ಹೊಸ ಟಿ.ಸಿ.ಗಳು ಸಹ ಸುಟ್ಟು ಹೋಗಿದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ಸಂಪರ್ಕ ಕಲ್ಪಿಸಲು ಎಳೆಯುವ ವೈಂಡಿ ವೈರ್‌ಗಳು ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಬೆಂಕಿಯ ಕೆನ್ನಾಲಿಗೆ ಹಳೆಯ ಮತ್ತು ಹೊಸ ವಿದ್ಯುತ್ ತಂತಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು ೨೦ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ರಿಪೇರಿ ಕೇಂದ್ರದ ಮೇಲ್ಚಾವಣಿ ಪೂರ್ಣ ಸುಟ್ಟು ಕರಕಲಾಗಿದೆ.
ರಿಪೇರಿ ಕೇಂದ್ರಕ್ಕೆ ಬೆಂಕಿ ತಗುಲಿ ಟ್ರಾನ್ಸ್ಫಾರ್ಮರ್‌ಗಳು ಸ್ಪೋಟವಾಗುತ್ತಿರುವ ಶಬ್ದವನ್ನು ಸಮೀಪದಲ್ಲಿಯೆ ಮನೆ ಇರುವ ಮೆಸ್ಕಾಂ ಇಂಜಿನಿಯರ್ ಶ್ರೀನಿವಾಸ್ ದಂಪತಿಗಳು ಮೊದಲು ಗಮನಿಸಿದ್ದಾರೆ. ಅವರು ನೋಡುವಾಗ ಬೆಂಕಿಯ ಕೆನ್ನಾಲಿಗೆ ಆಕಾಶವನ್ನು ಮುಟ್ಟಿತ್ತು. ತಕ್ಷಣ ಅವರು ಮನೆಯಿಂದ ಹೊರಗೆ ಬಂದು ಸಂಬoಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡುವ ಜೊತೆಗೆ ಕಾಲೋನಿಯಲ್ಲಿದ್ದ ಮೆಸ್ಕಾಂ ಅಧಿಕಾರಿ ಸಿಬ್ಬಂದಿಗಳನ್ನು ಎಬ್ಬಿಸಿ ಬೆಂಕಿ ಬಿದ್ದಿರುವ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿದ್ದಾರೆ. ತಕ್ಷಣ ಬೆಂಕಿ ಬಿದ್ದಿದ್ದನ್ನು ಗಮನಿಸಿದ್ದರಿಂದ ಅಕ್ಕಪಕ್ಕದಲ್ಲಿದ್ದ ಮನೆ, ಕಚೇರಿ, ವಾಹನಗಳಿಗೆ ಯಾವುದೇ ರೀತಿಯ ಅನಾಹುತ ಆಗಿಲ್ಲ.








