ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಶನೀಶ್ವರ ದೇವಾಲಯಗಳಲ್ಲಿ ಒಂದು ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯ. ಈ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಆಗಮಿಸುತ್ತದೆ. ಇಂತಹ ಶ್ರೀ ಕ್ಷೇತ್ರದಲ್ಲಿ ಇದೇ ಜನವರಿ 29, 30ರಂದು 23ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಗುತ್ತಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯದ ಧರ್ಮದರ್ಶಿಗಳಾದಂತ ಬಂಗಾರಪ್ಪ ಅವರು, ಜನವರಿ.29ರಂದು ಬೆಳಗ್ಗೆ 8 ಗಂಟೆಯಿಂದ ಶ್ರೀ ದೇವರಿಗೆ ಫಲಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಹೋಮ, ದೇವನಾದಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ, ಆ ಬಳಿಕ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ ಯಾಗಶಾಲಾ ಪ್ರವೇಶ, ಮಂಡಲಾರಾಧನೆ, ಕಲಶಾ ಸ್ಥಾಪನಾ ಪೂಜಾ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ ಎಂದಿದ್ದಾರೆ.
ದಿನಾಂಕ 30-01-2026ರ ಶುಕ್ರವಾರದಂದು ಗಣಪತಿ ಹೋಮ, ಪುಣ್ಯಾಹ, ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಪೂಜೆ ಹಾಗೂ ಶ್ರೀ ಶನೀಶ್ವರ ದೇವರಿಗೆ ಕಲಾವೃದ್ಧಿ ಹೋಮ ನೆರವೇರಿಸಲಾಗುತ್ತದೆ. ಶ್ರೀ ದತ್ತಾತ್ರೇಯ ಮೂಲ ಮಂತ್ರ ಹವನ ಹಾಗೂ ಸತ್ಯನಾರಾಯಣ ವೃತಕಥಾ, ಪೂರ್ಣಾಹುತಿ, ರಂಗಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ತುಲಾಭಾರ, ಉರುಳು ಸೇವೆ ನಡೆಯಲಿದೆ. ಆ ಬಳಿಕ ಸಂಜೆ 5 ಗಂಟೆಯಿಂದ 7 ಗಂಟೆಯೊಳಗೆ ಚಂಡೆ ವಾದ್ಯ, ಹರಿಕುಣಿತ ಸೇವೆಯೊಂದಿಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.

ಜನವರಿ.30ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಕುಣಿತ ಸಮೇತ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ 7ರಿಂದ 8.30ರವರೆಗೆ ಶ್ರೀ ಮಹಾಲಸ ಮೆಲೋಡಿಸ್ ಸಾಗರ ಇವರಿಂದ ಮಧುರ ಗಾನ ಕಾರ್ಯಕ್ರಮ ಇರುತ್ತದೆ. ರಾತ್ರಿ 9 ಗಂಟೆಯಿಂದ 12ರವರೆಗೆ ಕರ್ನಾಟಕ ನಾಟ್ಯಕಲಾ ಅಕಾಡೆಮಿ, ಭಟ್ಕಳ ಇವರಿಂದ ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ನಡೆಯಲಿದೆ. 12.30ರಿಂದ ಬೆಳಗ್ಗೆ 5ರವರೆಗೆ ಬ್ರಾಹ್ಮಿಯಕ್ಷ ಕಲಾವೃಂದ ಹೆನ್ನಾಬೈಲು, ಹೊಸಂಗಡಿ ಇವರಿಂದ ಸುಂದೋಪ ಸುಂದ ಯಕ್ಷಗಾನ ಪ್ರಸಂಗ ಏರ್ಪಡಿಸಿರುವುದಾಗಿ ಹೇಳಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಲಾಗಿತ್ತು, ಆದರೇ ವಿಧಾನಮಂಡಲದ ಅಧಿವೇಶನ ಇರುವ ಕಾರಣ ಅವರು ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ಮಾಜಿ ಶಾಸಕರಾದಂತ ಹರತಾಳು ಹಾಲಪ್ಪ ಅವರನ್ನು ಆಹ್ವಾನಿಸಲಾಗಿದೆ. ಅವರು ಬರುವುದಾಗಿ ತಿಳಿಸಿದ್ದಾರೆ. ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ ಅವರು ಪ್ರತಿವರ್ಷದಂತೆ ಈ ವರ್ಷವೂ ಬರಲಿದ್ದಾರೆ ಎಂದರು.
ನಮ್ಮ ಕುಲದ ಗುರುಗಳಾದಂತ ಶ್ರೀ ಶ್ರೀ ಶ್ರೀ ರೇಣುಕಾನಂದ ಮಹಾಸ್ವಾಮಿಗಳನ್ನು ಪ್ರತಿ ವರ್ಷ ಕರೆಯಲಾಗುತ್ತದೆ. ಅದರಂತೆ ಈ ವರ್ಷವೂ ಕರೆಯಲಾಗಿದೆ. ಅವರು ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವರ 23ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಬರುವ ಭಕ್ತರಿಗೆ ಯಾವುದೇ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದಲ್ಲೊಂದು ಪವರ್ ಪುಲ್ ಶನೀಶ್ವರ ದೇವಾಲಯ: ಕಷ್ಟಗಳು ಪರಿಹಾರ ಗ್ಯಾರಂಟಿ ಎನ್ನುತ್ತಿದ್ದಾರೆ ಭಕ್ತರು








