ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ಸಂಖ್ಯೆ ಏರುತ್ತಲೇ ಇದ್ದು, ಇದೀಗ ತನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿಯೊಬ್ಬರು ದೂರು ನೀಡಿದ್ದಾರೆ.
ಗೋಕರ್ಣ ಬಳಿಯ ಗಂಗೆಕೊಳ್ಳದ ಯುವಕ ಲೋಕೇಶ್ ನಾಪತ್ತೆಯಾಗಿದ್ದು, ಮಗನನ್ನು ಹುಡುಕಿಕೊಡಿ ಎಂದು ಲೋಕೇಶ್ ತಾಯಿ ಮಾಹಾದೇವಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳೆದ ಐದು ದಿನಗಳಿಂದ ಲೋಕೇಶ್ ಮನೆಗೆ ಬಂದಿಲ್ಲ. ಗುಡ್ಡ ಕುಸಿತದ ದಿನ ಅಲ್ಲಿನ ಹೋಟೆಲ್ ನಲ್ಲಿ ಲೋಕೇಶ್ ಇದ್ದ ಎಂಬ ಮಾಹಿತಿ ಇದೆ. ಹೋಟೆಲ್ ನಲ್ಲಿ ಲೋಕೇಶ್ ಇದ್ದ ಬಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಕೂಡ ನೋಡಿದ್ದರಂತೆ. ಬಸ್ ಪಾಸ್ ಆದ ಕೆಲವೇ ನಿಮಿಷಗಳಲ್ಲಿ ಗುಡ್ಡ ಕುಸಿತವಾಗಿದೆ ಎಂದು ತಿಳಿಸಿದ್ದಾರೆ.
ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್, ರಜೆ ಮೇಲೆ ಊರಿಗೆ ಬಂದಿದ್ದ, ಗುಡ್ಡ ಕುಸಿತದ ದಿನ ಶೃಂಗೇರಿಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ. ಐದು ದಿನಗಳಿಂದ ಶೃಂಗೇರಿಗೂ ಹೋಗಿಲ್ಲ, ಅತ್ತ ಕೆಲಸಕ್ಕೆ ಗೋವಾಗೂ ಹೋಗಿಲ್ಲ. ಹೀಗಾಗಿ ಗುಡ್ಡ ಕುಸಿತದಲ್ಲಿ ಲೋಕೇಶ್ ಕಣ್ಮರೆಯಾಗಿರಬಹುದು ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.